ಲೇಖನ
ಸಂಪರ್ಕಯುಗದಲ್ಲಿ ಸ್ವಗತ
-ಅಕ್ಷರ ಕೆ.ವಿ.
ನಾವೀಗ ಬದುಕುತ್ತಿರುವ ಕಾಲಮಾನಕ್ಕೆ ಒಂದು ಹೆಸರು ಕೊಡಬೇಕೆಂದರೆ ನಾವದಕ್ಕೆ ‘ಸಂಪರ್ಕಯುಗ’
ಎಂದು ಕರೆದುಕೊಳ್ಳಬಹುದು. ಹಿಂದೆ, ಇಂಗ್ಲಿಷ್ ಭಾಷೆಯಲ್ಲಿ ‘ಸಾರಿಗೆ’ ಎಂಬರ್ಥದಲ್ಲಿ
ಬಳೆಕೆಯಾಗುತ್ತಿದ್ದ ‘ಕಮ್ಯುನಿಕೇಶನ್’ ಎಂಬ ಶಬ್ದವು ಕಳೆದ ಶತಮಾನದ ಹೊತ್ತಿಗೆ ಹಲವು
ಅರ್ಥಾಂತರಗಳನ್ನು ಪಡೆದು ಈಗ ‘ಸಂಪರ್ಕ’ ಎಂಬರ್ಥವನ್ನು ಪಡೆದುಕೊಂಡು ಪ್ರತಿಷ್ಠಿತವಾಗಿದೆ; ಈ ಯುಗದ
ಒಂದು ಸೂಚಕಶಬ್ದವಾಗಿ ಸ್ಥಾಪಿತವಾಗಿದೆ. ಕನ್ನಡದಲ್ಲಿಯೂ ಸಂಪರ್ಕವೆಂಬ ಶಬ್ದ ಸಾಕಷ್ಟು
ಅರ್ಥಾಂತರಕ್ಕೆ ಒಳಗಾಗಿದೆ - ಹಳೆಯ ಶಬ್ದಕೋಶಗಳನ್ನು ತೆಗೆದು ನೋಡಿದರೆ ಅವು ಸಂಪರ್ಕವೆಂಬ
ಶಬ್ದಕ್ಕೆ ಕೂಡುವಿಕೆ, ಸ್ಪರ್ಶ, ಮಿಲನ ಇತ್ಯಾದಿ ಭೌತಿಕ ಸಂಬಂಧಗಳನ್ನೇ ಸೂಚಿಸುವ ಅರ್ಥಗಳನ್ನು
ಕೊಡುತ್ತವೆ. ಆದರೆ, ಇವತ್ತು ಆ ಶಬ್ದದ ಅರ್ಥ ಹೆಚ್ಚಾಗಿ ದೂರದಿಂಲೇ ನಡೆಯುವ ವ್ಯವಹಾರಗಳಿಗೆ
ಸೂಚಕವಾಗಿಬಿಟ್ಟಿದ್ದೆ. ಅಷ್ಟೇ ಅಲ್ಲ, ಹಿಂದೆ ಸಂಪರ್ಕವು, ಹರಿಯುವ ನೀರಿನ ಹಾಗೆ,
ವ್ಯಕ್ತಿ-ಸಮುದಾಯಗಳ ಸಮ್ಮಿಲನದ ಮೂಲಕ ಅಸಮಾನತೆಗಳನ್ನು ಕಡಿಮೆ ಮಾಡುವ ಒಂದು ಸಹಜ
ಪ್ರಕ್ರಿಯೆಯಾಗಿದ್ದರೆ ಇವತ್ತು ಅದು ಅಸಮಾನತೆಗಳನ್ನು ಕಾಯ್ದು ರಕ್ಷಿಸಿಕೊಳ್ಳುವುದಕ್ಕೆ ಅಧಿಕಾರ
ಮತ್ತು ಧನಶಕ್ತಿಗಳು ಬಳಸುವ ಉಪಾಯವಾಗಿ ಪರಿಣಮಿಸಿದೆ.
ಹೀಗೆ, ಹಳೆಯ ಒಂದು ಪರಿಕಲ್ಪನೆಯು ಆಧುನಿಕಯುಗದಲ್ಲಿ ವಿಪರೀತಾರ್ಥ ಪಡೆಯುವುದು ಅಪರೂಪದ ಸಂಗತಿಯೇನೂ
ಅಲ್ಲ. ಆಧುನಿಕತೆಯ ಕಟುಟೀಕಾಕಾರನೆಂದು ಹೆಸರಾದ ಚಿಂತಕ ಇವಾನ್ ಇಲ್ಲಿಚ್ ಇಂಥ ಅರ್ಥಪಲ್ಲಟಗಳ ಒಂದು
ತಪಶೀಲನ್ನೇ ತನ್ನ ಬರಹಗಳಲ್ಲಿ ಬಿಚ್ಚಿಡುತ್ತಹೋಗಿದ್ದಾನೆ. ಇಲ್ಲಿಚ್‌ನ ಪ್ರಕಾರ ಆಧುನಿಕಯುಗದಲ್ಲಿ
‘ಶಿಕ್ಷಣ’ದಿಂದಾಗಿಯೇ ‘ತಿಳಿವಳಿಕೆ’ ಕಡಿಮೆಯಾಗಿದೆ; ‘ಸಾರಿಗೆ’ಯ ಬೆಳವಣಿಗೆಯಿಂದಲೇ ‘ಚಲನೆ’
ಕುಂಠಿತಗೊಂಡಿದೆ; ‘ವೈದ್ಯಕೀಯ’ದಿಂದಾಗಿಯೇ ‘ಆರೋಗ್ಯ’ಕ್ಕೆ ಅಪಾಯ ಒದಗಿದೆ’ ‘ರಕ್ಷಣಾ
ಯೋಜನೆ’ಗಳಿಂದಾಗಿಯೇ ‘ಭದ್ರತೆ’ ಕಷ್ಟಕರವಾಗಿದೆ. ಇಲ್ಲಿಚ್‌ನ ಈ ಪಟ್ಟಿಗೆ ನಾವು ‘ಸಂಪರ್ಕ’
ದಿಂದಾಗಿಯೇ ‘ಸಮ್ಮಿಲನ’ ದುಸ್ತರವಾಗಿದೆ ಎಂಬುದನ್ನೂ ಬೇಕಿದ್ದರೆ ಸೇರಿಸಿಕೊಳ್ಳಬಹುದು. ವರ್ಷಗಳ
ಹಿಂದೆ, ಅಮೇರಿಕನ್ ಪತ್ರಿಕೆಯೊಂದರಲ್ಲಿ ಕಂಡಿದ್ದ ಒಂದು ವ್ಯಂಗ್ಯಚಿತ್ರ ನನಗಿಲ್ಲಿ ನೆನಪಾಗುತ್ತದೆ
- ಒಂದು ಸಂತೋಷಕೂಟದಲ್ಲಿ ಬಹಳ ಜನ ಸೇರಿ ಕೈಕೈ ಹಿಡಿದು ನರ್ತಿಸುತ್ತಿದ್ದಾರೆ; ಆದರೆ ಅವರೆಲ್ಲರೂ
ತಮ್ಮ ಕೈಯಲ್ಲಿರುವ ಮೊಬೈಲ್ ಫೋನಿನಿಂದ ಇನ್ನಾರ ಜತೆಗೋ ಮಾತಾಡುತ್ತಿದ್ದಾರೆ! ಅಸಂಗತನಾಟಕದ ಒಂದು
ದೃಶ್ಯವನ್ನು ನೆನಪಿಸುವ ಈ ಚಿತ್ರ ಇವತ್ತಿನ ಸಂಪರ್ಕಯುಗಕ್ಕೊಂದು ಸೊಗಸಾದ ರೂಪಕವೆಂದು
ನನಗನ್ನಿಸುತ್ತದೆ.
ಸಂಪರ್ಕವೆಂಬ ಪರಿಕಲ್ಪನೆಯ ಇಂಥ ವೈಪರೀತ್ಯಕ್ಕೆ ಪ್ರತಿರೋಧವಾಗಿ ನಾನಿಲ್ಲಿ ‘ಸ್ವಗತ’ವಂಬ ಇನ್ನೊಂದು
ಪರಿಭಾಷೆಯನ್ನು ಹೂಡಿ ಬಳಸಲು ಹೊರಟಿದ್ದೇನೆ. ಮೇಲ್ನೋಟಕ್ಕೆ ಸ್ವಗತವೆಂದರೆ - ‘ತನ್ನೊಳಗೆ ತಾನೇ
ಆಡಿಕೊಳ್ಳುವ ಮಾತು’, ಅರ್ಥಾತ್ ಅದು ಸಂಪರ್ಕವೆಂಬ ಪರಿಕಲ್ಪನೆಗೆ ವಿರುದ್ಧವಾದದ್ದು. ಅದರೆ, ತುಸು
ಕೆದಕಿ ನೋಡಲು ಹೊರಟರೆ, ಸ್ವಗತವೆಂಬ ಶಬ್ದದ ನಿಜವಾದ ಅರ್ಥವ್ಯಾಪ್ತಿ ಇನ್ನೂ ವಿಶಾಲವಾದದ್ದು.
ರಂಗಭೂಮಿಯ ಮೂಲದಿಂದ ಬಂದಿರುವ ಈ ಶಬ್ದವನ್ನು ವಿವರಿಸಲು ಅಲ್ಲಿಯ ಒಂದು ಉದಾಹರಣೆಯನ್ನೇ
ಎತ್ತಿಕೊಳ್ಳೋಣ - ಹ್ಯಾಮ್ಲೆಟ್ ತನ್ನ ಪ್ರಸಿದ್ಧ ಸ್ವಗತದಲ್ಲಿ ‘ಟು ಬಿ ಆರ್ ನಾಟ್ ಟು ಬಿ...’
ಎಂದು ಚಿಂತಿಸುವಾಗ ಅಥವಾ ಪುತಿನರ ಅಹಲ್ಯೆ ನಾಟಕದ ಅಂತ್ಯದಲ್ಲಿ ‘ಬಯಸುವೆ ನಾ ಗಂಗೆಯ ತೆರ ಪದದಿ
ಕರಗಿ ಹರಿಯೆ...’ ಎಂದು ಉದ್ಗರಿಸಿವುವಾಗ ಆಯಾ ಪಾತ್ರಗಳು ನಡೆಸುತ್ತಿರುವ ಸಂವಹನೆಯ ವ್ಯಾಪಾರ ಯಾವ
ಬಗೆಯದು? ಅದು ಒಂದು ವ್ಯಕ್ತಿ ತನ್ನೊಳಗೇ ತಾನು ಆಡಿಕೊಳ್ಳುತ್ತಿರುವ ಮಾತು, ನಿಜ. ಆದರೆ, ಆ
ಮಾತನ್ನು ಒಂದು ಪ್ರೇಕ್ಷಕವರ್ಗದ ಸನ್ನಿಧಿಯಲ್ಲಿ ಆಡುತ್ತಿದ್ದೇವೆಂಬ ಅರಿವೂ ಆ ಪಾತ್ರಗಳಿಗೆ ಇದೆ.
ಹಾಗಾಗಿ ಸ್ವಗತವೆಂಬುದು ಅತ್ತ ನೇರವಾದ ಸಂಪರ್ಕವೂ ಅಲ್ಲ, ಇತ್ತ ಪೂರ್ಣ ಸಂಪರ್ಕವಿಹೀನತೆಯೂ ಅಲ್ಲ.
ಸಂಪರ್ಕ ಹಾಗೂ ಅಸಂಪರ್ಕದ ನಡುವೆ, ಅಂತರಂಗ ಮತ್ತು ಬಹಿರಂಗಗಳ ನಡುವೆ ಇರಬಹುದಾದ ಒಂದು ಬೂದುಪಟ್ಟಿಯ
ಮೇಲಿನ ಸಂವಹನ ಕ್ರಿಯೆ ಇದು.
ಈ ಸಂವಹನೆಯ ವಿಧಾನದಲ್ಲಿರುವ ವೈಶಿಷ್ಟ್ಯವೊಂದು ಗೊತ್ತಾಗಲಿಕ್ಕೆ ನಾನಿದನ್ನು ಅಂತರ್ಜಾಲದಲ್ಲಿ
ನಡೆಸುವ ಚಾಟಿಂಗ್ ಎಂಬ ಹರಟೆಗೆ ಹೋಲಿಸುತ್ತೇನೆ. ಬಹುತೇಕ ವೃಥಾ ಕಾಲಕ್ಷೇಪಕ್ಕಾಗಿಯೇ ನಡೆಯುವ ಈ
ಚಾಟಿಂಗ್ ಇವತ್ತು ತುಂಬ ಜನಪ್ರಿಯ ಮಾತ್ರವೇ ಅಲ್ಲ, ಅದು ನಮ್ಮ ಸಂಪರ್ಕ ಸಾಧ್ಯತೆಗಳ ಒಂದು ಮಹತ್ವದ
ಮುನ್ನಡೆ ಎಂದು ನಾವು ಭಾವಿಸಿಕೊಂಡಿದ್ದೇವೆ. ಆದರೆ, ಅದರಿಂದ ನಿಜವಾಗಿಯೂ ಸಾಧಿತವಾಗುವ ‘ಸಂಪರ್ಕ’
ಯಾವ ಬಗೆಯದು? ಇಂಥ ಸಂಪರ್ಕದ ಹಿಂದಿರುವ ಮುಖಾಮುಖಿ ಯಾವ ರೀತಿಯದು? ಅಂತರ್ಜಾಲದಲ್ಲಿ ನಡೆಯುವ
ಚಾಟಿಂಗ್‌ನಲ್ಲಿ ಈ ತುದಿಯಲ್ಲಿ ನಾವಿದ್ದರೆ ಇನ್ನೊಂದು ತುದಿಗೆ ದೇಶಾಂತರ-ಖಂಡಾಂತರದ ಇನ್ನೊಂದು
ವ್ಯಕ್ತಿ ಇರುತ್ತಾನೆ/ಳೆ. ಆದರೆ, ಆ ವ್ಯಕ್ತಿ ಯಾರೆಂಬುದು ನಮಗೆ ಗೊತ್ತಿಲ್ಲ; ಆ ವ್ಯಕ್ತಿ
ತಾನಾರೆಂದು ಹೇಳಿಕೊಳ್ಳುತ್ತಾನೇ/ಳೋ ಅದೇ ಆ ವ್ಯಕ್ತಿ ಹೌದೇ ಎಂಬುದೂ ನಿಮಗೆ ನಿಶ್ಚಿತವಿಲ್ಲ.
ಹಾಗಿದ್ದರೂ ನಾವು ಆ ಹರಟೆಯನ್ನು ಮುಂದುವರೆಸುತ್ತೇವೆ - ಇರವಿನ ಭ್ರಮೆಯನ್ನೇ ಇರವೆಂದು ತಿಳಿದು.
ಆದ್ದರಿಂದಲೇ ಖಂಡಾಂತರದ ವ್ಯಪ್ತಿಯಲ್ಲಿ ನಡೆಯುವ ಈ ಸಂಪರ್ಕವು ಲೋಕಾಭಿರಾಮಕ್ಕಿಂತ
ಹೆಚ್ಚಿನದೇನನ್ನೂ ಸಾಧಿಸಲಾರದು. ಅದೇ, ಸ್ವಗತದ ಸನ್ನಿವೇಶ ಇದಕ್ಕೆ ತದ್ವಿರುದ್ಧ. ಇಲ್ಲಿ
ಪ್ರೇಕ್ಷಕರ ಇರವು ಗೊತ್ತಿದೆ; ಹಾಗಿದ್ದರೂ ಅದನ್ನು ಭ್ರಮೆಯೆಂದು ಭಾವಿಸಿಕೊಳ್ಳಲಾಗುತ್ತದೆ.
ಆದ್ದರಿಂದಲೇ ಇಲ್ಲಿ ನಿರ್ದಿಷ್ಟ ಸ್ಥಳ-ಕಾಲ-ವ್ಯಕ್ತಿಗಳಿಗೆ ಬದ್ಧವಾಗಿ ನಡೆಯುವ ಮಾತುಕತೆ ಅಂತರಂಗ
ಮತ್ತು ಬಹಿರಂಗದ ಜಗತ್ತಿನ ಎತ್ತರಗಳನ್ನು ಹಿಡಿಯಬಲ್ಲದು. ಅರ್ಥಾತ್, ಚಾಟಿಂಗ್‌ನಲ್ಲಿ ಭ್ರಮೆಯೇ
ಇರವು; ಸ್ವಗತದಲ್ಲಿ ಇರವೇ ಭ್ರಮೆ. ಆದ್ದರಿಂದಲೇ ಇವತ್ತು ಸಂಪರ್ಕವೆನ್ನುವುದು ಸ್ವಗತದ ರೂಪ
ಪಡೆಯತೊಡಗಿದೆ; ಸ್ವಗತಕ್ಕೇ ಹೆಚ್ಚು ಸಂಪರ್ಕದ ಸಾಧ್ಯತೆಗಳು ಕಾಣಿಸುತ್ತವೆ.
ಹಾಗಂತ, ಸ್ವಗತವೆಂಬ ಪರಿಕಲ್ಪನೆಯು ಅತ್ಯಂತಿಕವಾಗಿ ಪರಿಶುದ್ಧವೆಂದೂ ಅದು ಯಾವತ್ತೂ
ಭ್ರಷ್ಟವಾಗಲಾರದೆಂದೂ ನಾನೇನೂ ಸೂಚಿಸುತ್ತಿಲ್ಲ. ಸ್ವಗತದ ಧಾಟಿಯನ್ನು ಕೃತಕವಾಗಿ ಅಳವಡಿಸಿದರೆ ಅದು
ಅತ್ಯಂತ ಕುಟಿಲವಾದ ಆತ್ಮರತಿ-ಆತ್ಮ ಪ್ರದರ್ಶನಗಳ ಮಾಧ್ಯಮವಾಗಿ ಮಾರ್ಪಡುತ್ತದೆನ್ನುವುದನ್ನು
ಕನ್ನಡದ ಈಚಿನ ಹೊಸ ಪತ್ರಿಕೋದ್ಯಮ ತುಂಬ ಸ್ಪಷ್ಟವಾಗಿಯೇ ತೋರಿಸಿದೆ. ಆದ್ದರಿಂದ ಇವತ್ತು ನಾವು
ಸಂಪರ್ಕಕ್ಕಿಂತ ಹೆಚ್ಚು ಸ್ವಗತಕ್ಕೆ ಒತ್ತು ಕೊಡುವುದು ಮಾತ್ರವಲ್ಲ, ಸ್ವಗತವನ್ನು ಇಂಥ ಅಪಾಯಗಳಿಂದ
ರಕ್ಷಿಸುವುದು ಕೂಡ ಮುಖ್ಯವಾದ ಕೆಲಸ ಎಂದು ನಾನು ಭಾವಿಸುತ್ತೇನೆ.
ನನ್ನ ಈ ಅಂಕಣದಲ್ಲಿ ಅಂಥ ಕೆಲಸವೊಂದನ್ನು ಮಾಡಬೇಕೆಂಬ ಇರಾದೆಯನ್ನು ಹೇಳಿಕೊಳ್ಳುತ್ತ ಸ್ವಗತಕ್ಕೆ
ನಿಮ್ಮನ್ನು ಸ್ವಾಗತಿಸುತ್ತೇನೆ.
ಬರಹಕ್ಕಿಳಿಸಿದವರು: ಕಿಶೋರ್ ಚಂದ್ರ
ಪರಿಶೀಲನೆ : ಕಿಶೋರ್ ಚಂದ್ರ