ಕವನ
ಶೀರ್ಷಿಕೆಗಳೇ ಇಲ್ಲದ ಐದು ಕವನಗಳು
-ಮಮತಾ ಜಿ. ಸಾಗರ
......1.....
ಶಬ್ದಗಳು ಯಾತಕ್ಕೆ ಹೀಗೆ
ಕಪ್ಪು ತುಂತುರು ಹನಿ!
ಬಿಳಿಯ ಅವಕಾಶಕ್ಕೆ
ಕೊಟ್ಟ ರೂಪ.
ಶಬ್ದಗಳು ಯಾತಕ್ಕೆ ಹೀಗೆ
ಕೇಳುವುದಿಲ್ಲ ಕಾಣುತ್ತವೆ,
ಶಬ್ದಗಳು ಕಾಣದವೂ ಕೇಳುತ್ತವೆ.
......2.....
ಸುರಗಿ ಹೂವಿನ ಕಂಪು
ಮಳೆ ಮಣ್ಣಿನ ಕಂಪು
ಒಲೆಯೊಳಗೆ ಸುಟ್ಟ ಗೇರು ಬೀಜದ ಕಂಪು
ಎಲ್ಲಿಂದ ಸುಳಿದಿತ್ತು ಈ ಕೆಂಪು,
ಒಂದೇ ಕ್ಷಣ ಧಿಗ್ಗನೆದ್ದು ಮುಳುಗಿತ್ತು.
ಘಳಿಗೆಗೊಂದೊಂದು ವಾಸನೆ
ಎಂದೋ ಎಲ್ಲೋ ಆಗಿದ್ದು
ತಟ್ಟನೆ ವಾಸ್ತವಕ್ಕಿಳಿದ ಹಾಗೆ
ಮರೆತ ಏನೇನನ್ನೋ ಮತ್ತೆ ಕರೆದಹಾಗೆ.
ಮಹಡಿ ಮೆಟ್ಟಿಲ ಹಿಂದೆ
ಕತ್ತಲಲಿ ಅವಿತು ಕೂತಿದ್ದು
ಹೊಡೆದುಕೊಳ್ಳುವ ಎದೆಯ
ಬಿಗಿ ಹಿಡಿದು ಬಿಕ್ಕದೇ ಅತ್ತಿದ್ದು
ಜಗಲಿ ಬದಿ ಮಬ್ಬಗೆ ಮುಖಕೊಟ್ಟು
ಸಂಜೆ ಸುಮ್ಮನೆ ಕೂತಿ ಕಳೆದಿದ್ದು.
ಇದು ಯಾವ ನೆನಪು
ಗಾಳಿ ಬೀಸಿದಹಾಗೆ;
ಹೀಗೆ ಮೇಲಿಂದಮೇಲೆ
ರೆಪ್ಪೆ ಮಿಟುಕಿಸಿದಹಾಗೆ
ಕಣ್ಣು ಮುಚ್ಚಿದರೆ ಚಿತ್ರಗಳು
ಭಿತಿಯಲೆ ಬೆರೆತು,
ಕಂಡಿದ್ದು,
ಕಾಣದ್ದು,
ಎಲ್ಲ ರಾಶಿ ರಾಶಿ.....
ಮೋಡದಲಿ ಮುಳುಗಿದ ಹಾಗೆ
ಚಕ ಚಕನೆ ಸರಿದು.....
ಯಾರೋ ಕರೆದರು...... ಎಲ್ಲೋ!
ಯಾರು ಕರೆದರು?
ಎಲ್ಲಿ?
ಇದು ಯಾವ ಬಾಗಿಲಿನಗಳಿ
ಕಟ ಕಟ ಸದ್ದು
ತೆರೆದರೆ ನೂರೆಂಟು ಪ್ರಶ್ನೆ
ಈಗ ಹೊತ್ತೇನು?
ಹೊತ್ತಿಗೆ ಹಿಂದಿಲ್ಲ ಮುಂದಿಲ್ಲ
ಆದರ ಮೈಯ್ಯೆಲ್ಲ ಮರುಕಳಿಸುವ ನೆನಪು.
.....3.....
`ನಾನು'
ಅಂದರೆ;
ಒಂದು ಜೊತೆ
ಮೆತ್ತಿಗನ ಮೊಲೆ,
ತೊಡೆ ಸಂದಲ್ಲಿ ಅಡಗಿದ
ಕತ್ತೆಲ ಕೋಶ.
.....4.....
.......... - ೩
-ಮಮತಾ ಜಿ. ಸಾಗರ
ನಾವು
ನಮ್ಮ ನಮ್ಮ ದಿನಚರಿಯಲ್ಲಿ
ಎಂದಿನಂತೆ.........
ಒಬ್ಬರ ಮುಂದೊಬ್ಬರು
ಸುಮ್ಮನೆ ಹಾಗೆ
ಇರುತ್ತೇವೆ.
ಆಗಲೂ ಹಾಗೆ
ಈಗಲೂ ಹಾಗೆ
`ಆ' ಅನ್ನುವುದು `ಈ' ಆದಮಾತ್ರಕ್ಕೆ
ಎಷ್ಟೊಂದು ಬದಲಾವಣೆ ಎಲ್ಲದರಲ್ಲು!!
.....5.....
ಚರ್ಮದಡಿಗೆ
ಮೂಳೆ,
ಮಾಂಸ,
ಹರಿವ ಕತ್ತಲು.
ಮುಖದಲ್ಲಿ;
ಕತ್ತಲ ಚಹರೆ
ತೊಟ್ಟ ಭಾವವೆ ಬೇರೆ.
ಬರಹಕ್ಕಿಳಿಸಿದವರು: ಕಿಶೋರ್ ಚಂದ್ರ
ಪರಿಶೀಲನೆ : ಕಿಶೋರ್ ಚಂದ್ರ