ಕಥಾಮಾಲಿಕೆ-೧೧
ತೋಪು.
ಮೊಗಳ್ಳಿ ಗಣೇಷ್
ಹಳೆಯ ಮರಗಳನ್ನು ನೋಡುವುದೆಂದರೆ ನನಗೆ ಬಹಳ ಹಿತವಾದ ಕೆಲಸ. ಆ ಮರಗಳಲ್ಲಿ ಮೈಮರೆತು ಹತ್ತಾರು
ಬೇಸರಗಳನ್ನು ಮರೆತು ಬಿಡುತ್ತೇನೆ. ನಮ್ಮ ತಾತ ಊರ ತುಂಬಾ ಮಕ್ಕಳ ಕೈಯಿಂದ ಅನೇಕ ಬಗೆಯೆ ಮರಗಳನ್ನು
ನೆಡಿಸಿದ್ದ. ನಮ್ಮ ಪೂರ್ವಿಕರೂ ಕೂಡ ಅದರಂತೆಯೇ ತಲೆ ತಲಾಂತರಗಳಿಂದ ಎಲ್ಲೆಡೆ ಮರ ಬೆಳೆಸಿದ್ದರು.
ಹಾಗಾಗಿಯೇ ಇಡೀ ನಮ್ಮೂರು ಸೊಬಗಿನ ಬನದಂತೆ ಹಸಿರು ಬಟ್ಟೆಯಂತೆ ನೆಲೆಕ್ಕೆ ಅಂಟಿಕೊಂಡಿತ್ತು.
ನಾವೆಲ್ಲ ಹುಡುಗರು ಹೂ ಹಣ್ಣು ಕಾಯಿಗಳ ಮರಗಳಲ್ಲೇ ಬಹುಪಾಲು ನಮ್ಮ ಬಾಲ್ಯದ ಕಾಲವನ್ನು
ಕಳೆಯುತ್ತಿದ್ದೆವು. ಯಾವುದೇ ಹಣ್ಣಿನ ಮರಗಳು ಆಗ ನಮಗೆ ನೂರಾರು ಮಕ್ಕಳನ್ನು ಈದ ಮಹಾತಾಯಿಯಂತೆ
ಒಬ್ಬೊಬ್ಬರಿಗೂ ಹಣ್ಣ ಮೊಲೆ ತೊಟ್ತುಗಳ ಬಾಯಿಗಿಟ್ತಂತೆ ಕಾಣುತ್ತಿದ್ದವು. ಮಾವಿನ ಮರಗಳ ಬಗೆಗಂತು
ನಮ್ಮ ಮೋಹ ಹೇಳತೀರದಷ್ಟಿತ್ತು. ಮರಗಳ ಕಾಯುವ ಮಾಪಿಳ್ಳೆಗಳ ಕಣ್ಣು ತಪ್ಪಿಸಿ ಎತ್ತರದ ಮಾವಿನ ಮರಗಳ
ಮೇಲತ್ತಿ ಬೇಕಾದ ಹಣ್ಣು ಕಾಯಿಗಳ ಕಿತ್ತುಕೊಂಡು ಅಲ್ಲೇ ತಿಂದು ಹಲ್ಲುಗಳು ಎಷ್ಟೇ ಜುಂ ಹಿಡಿದು
ಹೊಟ್ಟೆಯಲ್ಲಿ ಹುಳಿ ಹಿಡಿದುಕೊಂಡರೂ ಬಿಡದೆ ಮೇದು ಕಳ್ಳ ಬೆಕ್ಕಿನಂತೆ ಕದ್ದು ಇಳಿದು ಮನೆ
ಸೇರಿಕೊಳ್ಳುತ್ತಿದ್ದೆವು. ಒಟ್ಟಿನಲ್ಲಿ ಆ ಮರಗಳೆಲ್ಲ ನಮಗೆ ನಮ್ಮ ನಮ್ಮ ಸೋದರ ಮಾವಂದಿರಂತೆಯೋ
ಅತ್ತೆಯೋ ಅವ್ವನೋ ಅಜ್ಜಿಯೋ ಆಗಿ ಬಾಲ್ಯದ ಬದುಕಿನ ತುಂಬಾ ಚಾಚಿಕೊಂಡಿದ್ದವು. ಮರಕೋತಿ ಆಟ ಆಡಲು
ಉಯ್ಯಾಲೆಯಾಡಲು ನಮಗವು ತಾಯಂದಿರ ತೊಟ್ಟಿಲಂತೆಯೇ ಕಾಣುತ್ತಿದ್ದವು. ತೊರೆ ಸಾಲಿನ ಗೇರು ಸೀಬೆ
ಸೀತಾಳ ಬೇಲ ಎಲಚಿ ಹಲಸು ಕಿತ್ತಳೆ ಚಕ್ಕೋತ ಅಂಕೋಲೆ ಹಣ್ಣಿನ ಮರಗಳಲ್ಲಿ ಹಕ್ಕಿಗಳ ಜೊತೆ ಸೇರಿಕೊಂಡು
ಯಾವುದೋ ಲೋಕಕ್ಕೆ ತೇಲಿ ಹೋಗುತ್ತಿದ್ದೆವು.
ನಮ್ಮ ಮನೆಗಳಲ್ಲಿ ಮರಗಿಡಗಳ ಜೊತೆಯಲ್ಲೇ ನಮ್ಮ ದಿನಚರಿ ಆರಂಭವಾಗುತ್ತಿತ್ತು. ಮುಂಜಾವು ಎದ್ದ
ಕೂಡಲೇ ನಾವೆಲ್ಲ ಖಡ್ಡಾಯವಾಗಿ ಒಂದೊಂದು ಮರದ ಮುಖ ನೋಡಿ ಮಸ್ಕರಿಸಬೇಕಿತ್ತು. ಹಾಗೆ ಮಾಡದಿದ್ದರೆ
ಅಜ್ಜಿ ನಮಗೆ ರೊಟ್ಟಿ ತಿನ್ನಲು ಅವಕಾಶ ಕೊಡುತ್ತಿರಲಿಲ್ಲ. ನಮ್ಮ ತಾಯಂತು ಎದ್ದಕೂಡಲೆ ಕಣ್ಣು
ಮುಚ್ಚಿಕೊಂಡೇ ಹಿತ್ತಿಲಿಗೆ ಬಂದು ತಾನೇ ನೆಟ್ಟು ಬೆಳಸಿದ್ದ ಸಂಪಿಗೆ ಮರವನ್ನು ನೋಡಿ ಮೂರು ಬಾರಿ
ನಮಸ್ಕರಿಸಿಯೇ ಮುಂದಿನ ಕೆಲಸಕ್ಕೆ ಕೈ ಹಾಕುತ್ತಿದ್ದರು. ಅಜ್ಜಿ ಬಿಲ್ಪತ್ರೆ ಮರದ ಪೂಜೆ ಮಾಡದೆ
ಎಂದೂ ಊಟ ಮಾಡಿದ್ದನ್ನು ನಾವ್ಯಾರೂ ಕಂಡಿರಲಿಲ್ಲ. ಆಕೆ ಆ ಮರದಬಗ್ಗೆ ಅಪಾರವಾದ ಎಂತಹ ಪ್ರೀತಿ
ಇಟ್ಟುಕೊಂಡಿದ್ದಳೆಂದರೆ: ಮಧ್ಯ ರಾತ್ರಿ ನಮಗಾರಿಗೂ ಗೊತ್ತಿಲ್ಲದಂತೆ ಎದ್ದು ಹೋಗಿ ಅದರ ಬುಡದಲ್ಲಿ
ಮಲಗಿ ಆ ಮರವನ್ನೇ ತಬ್ಬಿಕೊಂಡು ಎರಡೂ ಕೈಗಳಿಂದ ಬಾಚಿ ಬಿಗಿದು ಅಪ್ಪಿಕೊಂಡಂತೆ ಒರಗಿ ಹಾಗೇ ನೆಲದ
ಕಡೆಗೆ ಜಾರಿ ಮರವ ಹಿಡಿದುಕೊಂಡೇ ಸತ್ತು ಹೋಗಿದ್ದಳು. ಆಕೆ ಗತಕಾಲಕ್ಕೆ ಮುಳುಗಿ ಮರೆಯಾಗಿದ್ದರೂ
ಊರಲ್ಲಿದ್ದ ಅನೇಕ ಮರಗಳು ಒಣಗುತ್ತಿದ್ದರೂ ಎಷ್ಟೋ ವರ್ಷಗಳು ಉರುಳಿದರೂ ಆ ಮೇಲೆ ನಾವು ಆ
ಬಿಲ್ಪತ್ರೆ ಮರಗಳನ್ನು ಅಜ್ಜಿ ಮರ ಎಂದೇ ಕರೆಯುತ್ತಿದ್ದೆವು. ಈಗಲೂ ಅಷ್ಟೆ. ಎಲ್ಲೇ ಯಾವೂರಲ್ಲೇ
ಬಿಲ್ಪತ್ರೆ ಮರ ಕಣ್ಣಿಗೆ ಕಂಡಕೂಡಲೆ ನಮ್ಮ ಅಜ್ಜಿ ಜೀವಂತವಾಗಿಬಿಡುತ್ತಾಳೆ. ಆ ಬಿಲ್ಪತ್ರೆ ಮರದ
ಕಾಯಿಗಳಿಂದಲೇ ನಮ್ಮಜ್ಜಿ ನಮ್ಮೆಲ್ಲರ ತಲೆ ಕೊಳೆಯನ್ನು ತೊಳೆಯುತ್ತಿದ್ದರು. ಆಗ ಗತಕಾಲದ ಯಾವುದೋ
ಒಂದು ಯುಗದಲ್ಲಿ ಆ ಬಿಲ್ಪತ್ರೆ ಮರ ಒಬ್ಬ ಬ್ರಾಹ್ಮಣ ಹೆಣ್ಣು ಮಗಳಾಗಿದ್ದಳಂತೆ. ಹಾಗೆಂದು
ನಮ್ಮಜ್ಜಿಯೇ ನಮಗೆಲ್ಲ ಕತೆಯನ್ನು ಹೇಳುತ್ತಿದ್ದಳು.
ಆ ಅಗ್ರಹಾರದ ಹಾರುವರ ಹೆಣ್ಣುಮಗಳು ದಿನವೂ ಪ್ರಾತಃಕಾಲದ ಪೂಜೆಗಾಗಿ ಕಾಡಿನ ನಡುಮಧ್ಯದ ನದಿ
ತಿರಕ್ಕೆ ಬಂದು ಶುಧ್ಧ ಸೂಕ್ಷತೆಗಳ ಅಚರಿಸುತ್ತಿರಲು ಒಂದು ದಿನ ಅವಳ ಮಾರ್ಗದಲ್ಲಿ ಎದುರಾಗಿ ಒಬ್ಬ
ಭಿಕ್ಷುಕ ಬರುವುದು ರೂಢಿಯಯಿತು. ಆ ಭಿಕ್ಷುಕ ಇವಳನ್ನು ಕಂಡಕೂಡಲೆ ದಯಾಮಯ ವಿನಯದಿಂದ ತಲೆತಗ್ಗಿಸಿ
ಮಂಡಿಯೂರಿ ಕುಳಿತು ಭಿಕ್ಷೆಯ ಬಟ್ಟಲನ್ನು ಹಿಡಿದು ಕೂರತೊಡಗಿದ. ಒಂದು ದಿನ ಆಶರೀರವಾಣಿಯೊಂದು
ನುಡಿಯಿತು ‘ಇದು ನಿನ್ನ ಕರ್ಮ, ಅ ಭಿಕ್ಷೆ ಬಟ್ಟಲಿಗೆ ನೀನು ನಿನ್ನ ದಾಂಪತ್ಯದ ಬುತ್ತಿಯನ್ನು
ಹಾಕಲೇಬೇಕು. ಅವ್ನೇ ನಿನ್ನ ಪತಿ’ ಎಂದದನ್ನು ದಿನವೂ ಆಲಿಸಿ ಕೇಳಿ ಧ್ಯಾನಿಸಿ ಒಂದು ದಿನ ಎಂದಿನಂತೆ
ಮಂಡಿಯೂರಿ ಕುಳಿತು ಭಿಕ್ಷೆಯ ಬಟ್ಟಲ ಹಿಡಿದಿದ್ದವನ ಬಳಿ ಬಂದು ಪೂಜೆ ಮಾಡಿ ತಂದ ಹೂಗಳ ಸುರಿದು ಅವನ
ಮುಂಗೈಯ ಹಿಡಿದು ಒಪ್ಪಿಕೊಂಡಳು. ತನ್ನ ಅಗ್ರಹರಕ್ಕೆ ಅವನನ್ನು ಕಟ್ಟಿಕೊಂಡುಬಂದಳು. ಜನ
ತಿರಸ್ಕಾರದಿಂದ ದೂರ ತಳ್ಳಿದರು. ಗೋಳಾಡಿದಳು. ಆ ಭಿಕ್ಷುಕ ನಡುಗುತ್ತ ಪಾಪ ಪ್ರಜ್ನೆಯಿಂದ
ನರಳುತ್ತಾ ವಿನೀತನಾಗಿ ನಿಂತಿದ್ದ. ಅವಳು ಅಂಗಲಾಚಿ ಬೇಡುತ್ತಾ ಇವನೇ ನನ್ನ ಪ್ರಾಣ ಸಖ ಇವನೇ ನನ್ನ
ಪ್ರಿಯಕರ ಇವನೇ ನನ್ನ ಪತಿ ಇವನೇ ನನ್ನ ನಲ್ಲ ಎಂದು ಅವಳ ಜನಗಳ ಎದಿರು ವಿನಂತಿಸುತ್ತಾ ಇವನ
ಜೊತೆಯಲ್ಲೇ ಈ ಅಗ್ರಹಾರದ ಹೊರಗಾದರೂ ಒಂದು ಸೊಪ್ಪಿನ ಗುಡಿಸಲು ಹಾಕಿಕೊಂಡು ಸಂಸಾರ ಹೂಡಲು
ಪ್ರಾರ್ಥಿಸಿದಳು. ಅವಳ ಯಾವ ಗೋಳಿಗೂ ಅಗ್ರಹರದಲ್ಲಿ ಕರುಣೆಯಿರಲಿಲ್ಲ. ನಮ್ಮ ಕುಲಕ್ಕೆ
ವಿಷವಿಕ್ಕಿದವಳನ್ನು ಕ್ಷಮಿಸಲು ಧರ್ಮಶಾಸ್ತ್ರಗಳಲ್ಲಿ ಉಲ್ಲೇಖವಿಲ್ಲೆಂದು ಆಚೆಗೆ ನೂಕಿದರು.
ಆ ಮೇಲೆ ಆ ಹೆಣ್ಣು ಮಗಳು ಬದುಕಿಗಾಗಿ ಅ ನಲ್ಲನ ಕಟ್ಟಿಕೊಂಡು ಊರೂರು ಅಲೆದಳು. ಎಲ್ಲ ಕಡೆ
ಬಾಗಿಲುಗಳು ಮುಚ್ಚಿಕೊಂಡವು. ನೀಚ ಹೆಂಗಸೆಂದು ಜರಿದರು. ಕುಲಟೆ ಎಂದು ಕರೆದರು. ಛೀ ಥೂ ಎಂದು
ಉಗಿದರು. ಭಿಕ್ಶುಕ ಅವಳ ಮುಂಗೈ ಹಿಡಿದು ಅಳತೊಡಗಿದ. ಕೊನೆಗೊಂದು ದಿನ ಆ ಹೆಣ್ಣು ಮಗಳು ಒಂದು
ನಿರ್ಧಾರಕ್ಕೆ ಬಂದಳು. ನಮ್ಮನ್ನು ತಿರಸ್ಕರಿಸಿದವರಿಂದಲೇ ನಾವು ಅವರಿಗೆ ಅನನ್ಯವಾಗಿ ಪವಿತ್ರವಾಗಿ
ಅವರ ಎಲ್ಲ ಶುಭ ಕಾರ್ಯಗಳಿಗೂ ಒಂದಾಗಿ ಐಕ್ಯವಾಗಿ ಉಳಿದು ಬಿಡಬೇಕೆಂದು ತೀರ್ಮಾನಿಸಿದಳು. ಗಂಡನಿಗೆ
ತಿಳಿಸಿದಳು. ಆತ ಒಪ್ಪಿಕೊಂಡ. ಕಲ್ಲು ನೀರು ಹೊತ್ತಿನಲ್ಲಿ ಅಗ್ರಹಾರಕ್ಕೆ ತನ್ನ ನಲ್ಲನನ್ನು
ಕರೆದುಕೊಂಡು ಬ್ಂದು ಅವನನ್ನು ಬಲವಗಿ ಅಪ್ಪಿಕೊಂಡು ಅಲ್ಲೇ ಎರಡೂ ದೇಹಗಳ ಕೂಡಿಸಿ ಬೆಸೆದು ಎಲ್ಲ
ದೈವಗಳ ನೆನೆದು ಕೂಗಿಕೊಂಡು ಪ್ರಾಣ ಬಿಟ್ಟರಂತೆ. ಮುಂಜಾವು ಮೇಲೆಬೀಳುತ್ತಿರುವ ಹೊತ್ತಿಗಾಗಲೆ
ಅಗ್ರಹಾರದ ನಡು ಮಧ್ಯದಲ್ಲಿ ಬಿಲ್ಪತ್ರೆಮರ ಬೆಳೆದು ಕಯಿಬಿಟ್ಟು ನಿಂತಿತ್ತು. ಆ ಹೆಣ್ಣು ಮಗಳು
ಬಿಲ್ಪತ್ರೆ ಮರವಾಗಿ ಹುಟ್ಟಿ ಇವರೆಲ್ಲರ ಪವಿತ್ರ ಆಚರಣೆಗಳಲ್ಲಿ ನನೂ ನನ್ನ ನಲ್ಲನೂ ಸಲ್ಲಬೇಕೆಂದು
ಬಯಸಿದ್ದಳು. ಆ ಮರದ ಬಿಲ್ಪತ್ರೆ ಕಾಯಿಗಳಲ್ಲಿ ಅವಳ ಜೀವವಿದ್ದೂ ಅದರೊಳಗೇ ಆ ಮುಟ್ಟಿಸಿಕೊಳ್ಳದ
ಭಿಕ್ಷುಕನ ಜೀವಧಾತುವೂ ಐಕ್ಯವಾಗಿರುತ್ತದೆ. ಅಂತಹ ಬಿಲ್ಪತ್ರೆ ಮರದ ಕಾಯಿಗಳನ್ನು ಮುಂದೆ ಅಗ್ರಹರದ
ಆ ಜನ ಅಶರೀರವಾಣಿಯ ಮತು ಕೇಳಿ ಪವಿತ್ರ ಎಂದು ಒಪ್ಪಿಕೊಂಡು ಇಟ್ಟುಕೊಂಡರಂತೆ.
ಹೀಗಾಗಿ ಅಜ್ಜಿಗೆ ಯಾವತ್ತೂ ಬಿಲ್ಪತ್ರೆ ಮರದ ಬಗ್ಗೆ ವಿಶೇಷವಾದ ಗೌರವವಿತ್ತು. ಅ ಹೆಣ್ಣು ಗಂಡುಗಳ
ಬೆಸುಗೆಯಂತಾದ ಆ ಬಿಲ್ಪತ್ರೆ ಹಣ್ಣುಗಳ ಕತೆ ಯಾರಿಗಾದರೂ ಗೊತ್ತಿಲ್ಲ ಎಂದರೆ ನಮ್ಮಜ್ಜಿಗೆ ಸಿಟ್ಟು
ಬಂದುಬಿಡುತ್ತಿತ್ತು. ಶಾಲೆಯಲ್ಲಿ ನೀನು ಎಲ್ಲರಿಗೂ ಈ ಕತೆಯನ್ನು ಹೇಳಬೇಕೆಂದು ಅಜ್ಜಿ ಒತ್ತಾಯ
ಹೇರುತ್ತಿದ್ದಳು. ಒಟ್ಟಿನಲ್ಲಿ ಮರವಿಲ್ಲದ ನಮ್ಮ ಯಾವ ಕೆಲಸಗಳೂ ಆಗಲರವೆಂಬ ನಂಬಿಕೆಯನ್ನು ಎಲ್ಲರೂ
ನಮ್ಮಲ್ಲಿ ಹುಟ್ಟಿಸಿಬಿಟ್ಟರು. ಮದುವೆ ಸುಗ್ಗಿಯಲ್ಲಿ ಹೂ ಮರಗಳ ರಾಶಿ ಹೂ ಕೊಂಬೆಗಳ ಮುರಿದು ತಂದು
ಚಪ್ಪರಕ್ಕೆ ಕಟ್ಟಿ ಶೃಂಗರಿಸಿ ಆ ಮೇಲೆ ಮದುವೆ ಮುಗಿದ ನಂತರ ಅವು ಬಾಡಿಹೋಗುವಾಗ ಅ ಹೂವುಗಳಿಗೆ
ಯಾಕೆ ದೆವರು ಹೆಚ್ಚು ಆಯಸ್ಸು ಕೊಟ್ಟಿಲ್ಲ ಎಂದು ಬೇಸರಪಡುತ್ತಿದ್ದೆವು.
ಇವೆಲ್ಲಕ್ಕಿಂತ ಮಿಗಿಲಾಗಿ ಒಂದೊಂದು ಮರಕ್ಕೂ ನಮ್ಮ ಪೂರ್ವಿಕರ ಹೆಸರುಗಳ್ಲಿದ್ದವು. ನಮ್ಮ ಬೇಸಿಗೆಯ
ರಜಾ ಕಾಲದಲ್ಲಂತೂ ನಾವೆಲ್ಲಾ ಹುಡುಗರು ನಮ್ಮೆಲ್ಲರ ಸ್ವರ್ಗದಂತಿದ್ದ ಸುಂದರ ಸೊಬಗಿನ ಹಸಿರು ಸಿರಿಯ
ನಮ್ಮೂರ ನಮ್ಮವರ ಸ್ಮಶನದ ತೋಪಿಗೆ ಹೋಗಿ ಕಾಲದ ಅಲೆ ಅಲೆಯ ಲಯಗಳಲ್ಲಿ ನಾದಬಿಂದು ಝರಿಯಂತೆ
ಹರಿಯುತ್ತಾ ತೇಲುತ್ತಾ ಒಂದೊಂದು ಮರದ ಮೇಲಾಡಿ ಓಡಾಡಿ ಕುಣಿದು ಕುಪ್ಪಳಿಸಿ ಸುಖದ ಹುಲ್ಲುಹಾಸಿನ
ಮೇಲೆ ಬಿದ್ದು ಹೊರಳಾಡಿ ಆಟ ಆಡುತ್ತಿದ್ದೆವು. ಪೇಟೆ ಜನಗಳಂತೆ ಆ ಪೂರ್ವಿಕರ ತೋಪನ್ನು ನಾವ್ಯಾರೂ
ಸ್ಮಶಾನ ಎಂದು ಕರೆಯುತ್ತಿರಲಿಲ್ಲ. ಎಲ್ಲರೂ ಆ ಜಾಗವನ್ನು ‘ಜೀವ್ ಗಾಡು’ ಎಂದು ಕರೆಯುತ್ತಿದ್ದರು.
ಸತ್ತ ತಮ್ಮ ಪೂರ್ವಿಕರೆಲ್ಲರ ಬ೦ಧುಬಳಗದ ಸರ್ವರ ಜೀವವೂ ಅಲ್ಲಿನ ಮರಗಿಡ ಬಳ್ಳಿ ಲತೆಗಳಲ್ಲಿ
ಐಕ್ಯವಾಗಿ ಮು೦ದಿನ ಬಾಳುವೆ ನಡೆಸುತ್ತಾ ಸತ್ತವರಿಗಾಗಿ ಅಲ್ಲೇ ಕಾಯುತ್ತಾ ಕುಳಿತಿರುತ್ತಾರೆಂದು
ನಂಬಿ ಹಗೆ ಅಲ್ಲಿ ಅವರ ಜೀವಗಳೆಲ್ಲ ಸಂಗಮಿಸಿರುವುದರಿ೦ದ ಸ್ಮಶಾನ ಎನ್ನದೆ ಜೀವ್ ಗಾಡು ಎಮ್ದು
ನಮಗೆಲ್ಲ ತಿಳಿಸಿಕೊಡುತ್ತಿದ್ದರು. ನಿಜವಾಗಿಯೂ ನಮ್ಮ ಪಾಲಿಗೆ ಆ ಜೀವ್ ಗಾಡು ಒಮ್ದು ಸುಂದರ
ಸಿರಿವನವಾಗಿತ್ತು. ಅಲ್ಲಿ ಬೆಳೆದು ನಿ೦ತ ಪಚ್ಚೆಪೈರು ಹುಲ್ಲುಗಾವಲು ಬಾಗಿ ಬಳುಕಿ ಸುಯ್ಯನೆ
ಗಾಳಿಗೆ ತೂರಾಡಿ ಹಕ್ಕಿ ಹಿಂಡುಗಳ ಸಾಕಿಕೊ೦ಡಿತ್ತು. ನಿಸ್ಸಂದೇಹವಾಗಿ ಅದೊಂದು ಹೂಬನ. ಹಣ್ಣಿನ ತಾಣ
ನೆರಳಿನ ತವರು ತಂಪಿನಬೀಡು. ನಮ್ಮ ಪೂರ್ವಿಕರು ನೆಡೆದಾಡಿ ಬಾಳಿ ಬದುಕಿ ನೆನಪು ಬಿಟ್ಟುಹೋದ ನೆಲ.
ಅಲ್ಲಿ ಮೃತರಾದ ಒಬ್ಬೊಬ್ಬರ ಹೆಸರಿನಲ್ಲೂ ಅನೇಕ ತಲೆಮಾರುಗಳು ತರಾವರಿ ಮರಗಳ ನೆಟ್ಟು ಒಂದು ಪುಟ್ಟ
ಕಾಡಿನಂತೆಯೇ ಬೆಳೆಸಿದ್ದರು.
ನನಗೀಗಲೂ ಅಲ್ಲನ ಮರಗಳ ತೊಗಟೆಯ ವಾಸನೆ, ಹುಲ್ಲಿನ ದಳಗಳ ಕ೦ಪು. ಗಾಳಿಯ ಹಿಂಪು ಮುಮ್ಜನೆಯ ಮರ್ಮರ
ಸದ್ದು ಈಗತಾನೆ ಆಲಿಸಿದಂತೆ ನೆನಪಾಗುತ್ತದೆ. ಹೂ ಮೊಗ್ಗುಗಳ ವಾಸನೆ ಸುಗ್ಗಿಯಂತೆ ರಾಚುತ್ತದೆ.
ಅ೦ತಹ ನೆಲದಲ್ಲಿ ನಮ್ಮ ಪೂರ್ವಿಕರು ತಣ್ಣಗೆ ಮಲಗಿದ್ದರು. ಬದುಕಿನ ಬವಣೆಯಿಂದ ನೊಂದವರು ಅಲ್ಲಿ ಆ
ಬನದ ನೆರಳಿಗೆ ಹೋಗಿ ದಣಿವಾರಿಸಿಕೊಳ್ಳುತ್ತಿದ್ದರು. ನೂರಾರು ಜಾತಿಯ ಬೇಲಿಮ್ಯಾಗಳ ಹೂಬಳ್ಳಿಗಳು ಆ
ಮರಗಳ ತಬ್ಬಿಕೊಂಡಿದ್ದವು. ಅದೇ ಜಾಗದಲ್ಲಿ ಸಣ್ಣದೊಂದು ಹಳ್ಳ ಯವಾಗಲೂ ಜುಳು ಜುಳು ನಾದದಿ
ಹರಿಯುತ್ತಿತ್ತು. ಪೊದೆಗಳಲ್ಲಿ ಮೊಲಗಳು ನಿರ್ಭಯವಾಗಿ ಅಲ್ಲಿ ಸಂಸಾರ ಹೂಡಿದ್ದವು. ಯವೊಬ್ಬ
ಬೇಟೆಗಾರನು ಊರಿನ ಯವುದೇ ಪ್ರಾಣಿ ಪಕ್ಷಿಗಳನ್ನು ಕೊಲ್ಲುವ೦ತಿರಲಿಲ್ಲ. ಪ್ರಾಣಿ ಪಕ್ಷಿಗಳು ತಿ೦ದು
ಬಿಟ್ಟಿದ್ದನ್ನು ನರಪ್ರಾಣಿ ತಿನ್ನಬೇಕೆಂದು ಹಿರಿಯರು ಹೇಳಿತ್ತಿದ್ದರು. ಸ್ಮಾಶನದ ಮರಗಳ ಯಾವೊಂದು
ರೆಂಬೆ ಕೊಂಬೆಯನ್ನು ನಾವು ನೀವಿಗೊಳಪಡಿಸುವುದಕ್ಕೆ ಮನಸ್ಸು ಬರುತ್ತಿರಲಿಲ್ಲವೇನೊ. ಅವುಗಳ
ಹಣ್ಣುಗಳನ್ನು ನಾವೆಷೇ ಕಿತ್ತುತಿಂದರೂ ಯಾರೂ ಏನೂ ಅನ್ನುತ್ತಿರಲಿಲ್ಲ. ಆ ಮರಗಳಲ್ಲಿ ಅಲ್ಲಿ ಸತ್ತು
ಮಲಗಿರುವ ಒಬ್ಬೊಬ್ಬರ ಜೀವಾತ್ಮವೂ ಸೇರಿಕೊಂಡಿದೆ ಎಂದು ತಿಳಿದಿದ್ದೆವು. ಅದರಿಂದಲೇ ಅವುಗಳ ಕೊಂಬೆ
ಮುರಿದರೆ ಅದಕ್ಕೆ ನೋವಾಗುತ್ತದೆಂದು ಹೆದರುತ್ತಿದ್ದೆವು.
ಹೀಗಾಗಿಯೇ ಊರ ತುಂಬ ನೂರಾರು ಮರಗಳು ನಮ್ಮನ್ನೆಲ್ಲ ಕಾಯುವ ದೈವಗಳಂತೆ ಹೆಮ್ಮರಗಳಾಗಿ ಬೆಳೆದು
ದಟ್ಟವಾಗಿ ಸುತ್ತೆಲ್ಲ ಚಾಚಿಕೊಂಡಿದ್ದವು. ಹಿಂದೆ ನಮ್ಮ ತಾತನ ಕಾಲದಲ್ಲಿ ತಪ್ಪಿತಸ್ತರಿಗೆ
ಮರನೆಟ್ಟು ಬೆಳೆಸುವ ದಂಡವನ್ನು ವಿಧಿಸುತ್ತಿದ್ದರಂತೆ. ಆದರೆ ಬರಬರುತ್ತಾ ನಮ್ಮ ತಂದೆಯ ಕಾಲಕ್ಕೆ ಆ
ರೂಢಿ ತಪ್ಪಿಹೋಗಿತ್ತು. ನಮಗಂತೂ ಸ್ಮಶಾನ್ ಎಂದರೆ ದೆವ್ವಭೂತ ಪಿಶಾಚಿಗಳ ಹುಗೆ ಎಂಬಂತಹ ಭಯವೇ
ಇದ್ದಿರಲಿಲ್ಲ. ಅಲ್ಲಿ ಸತ್ತು ಮಲಗಿದವರೆಲ್ಲ ರಾತ್ರಿ ವೇಳೆ ಮೇಲೆದ್ದು ಬಂದು ಬಾಳಿನ ಕತೆಗಳ
ಬಿಚ್ಚಿಟ್ಟು ಆ ಮರಗಳಿಗೆ ಉಯ್ಯಾಲೆ ಬಿಗಿದು ಎಲ್ಲರೂ ಕೂಡಿಕೊಂಡು ಹಾಡಿ ಕುಣಿದು ನಲಿದು ಕತ್ತಲಲ್ಲೇ
ಸುಖದ ಸುಗ್ಗಿ ಸವಿಯಣ್ಣು ಚಂದಿರನ ಬೆಳದಿಂಗಳ ಕನಸು ಕಂಡು ನಮ್ಮಂತೆಯೇ ಬದುಕುತ್ತಾರೆಂದು ಅಜ್ಜಿ
ಯಾವಾಗಲೂ ಹೇಳುತ್ತಿದ್ದಳು.
ಹಾಗೇ ಇದ್ದುಬಿಡುವುದಕ್ಕೆ ಕಾಲ ನಮ್ಮನ್ನು ಬಿಡುವುದಿಲ್ಲವೋ ಅಥವಾ ನಾವೇ ಕಾಲವನ್ನು
ಬಿಡುವುದ್ಲ್ಲವೋ ಗೊತ್ತೇ ಆಗುವುದಿಲ್ಲ. ನಾವು ಹುಡುಗರು ದೊಡ್ಡವರಾಗುತ್ತಾ ಹೋದೆವು. ಕಾಲದ
ಪ್ರಭುತ್ವ ಬಲಿಯುತ್ತಿತ್ತು. ಶಿಕ್ಷಣದ ಸಲುವಾಗಿ ಅಂತಹ ಸುಂದರ ವೀವ್‍ಗಾಡಿನ ತೋಪಿನೂರನ್ನು ಬಿಟ್ಟು
ನಾನು ಪೇಟೆಯಲ್ಲಿ ನೆಲೆಯೂರಿದೆ. ಯಾವುದೋ ಒಂದು ಕೋರ್ಸ್ ಮುಗಿಸಿ ನನ್ನ ಎಡವಟ್ಟಾಟಗಳಲ್ಲಿ ಬಿದ್ದು
ಬಿದ್ದು ಮುಳುಗಿ ಸಾಕಾಗಿ ಕೊನೆಗೆ ಎಂತದೋ ಒಂದು ಲಡಾಸು ಕೆಲಸ ಹಿಡಿದು ಸಂಸಾರದ ಜಂಜಡದಲ್ಲಿ
ಮುಳುಗಿದೆ. ಊರು ಆಮೇಲಾಮೇಲೆ ಕನಸಿಗೆ ಅದೇ ಬಂದು ಹೋಗುವಂತಾಯಿತು. ಬದಲಾವಣೆಯ ಹೊಸಗಾಳಿ ಊರ ತುಂಬ
ವ್ಯಾಪಿಸಲು ಸಜ್ಜಾಗುತ್ತಿತ್ತು. ಆಗಿನ ಹಳೆಕಾಲದ ನಮ್ಮಂತೆ ಮರಗಳನ್ನು ದಿಟ್ಟಿಸಿ ನೋಡುತ್ತ
ಕೂರುವುದು ಸೋಬೇರಿಗಳ ಪ್ರಧಾನ ಲಕ್ಷಣ ಎಂಬತೆನಿಸಿ ಜನರೆಲ್ಲ ಯಾವುದಾವುದೋ ಸಂಕಟ ಅನುಮಾನ ಹಿಂದೆ
ಆಸೆ ಕನಸುಗಳಲ್ಲಿ ಮುಳುಗಿ ಹೋಗಿದ್ದರು. ಮರದ ನೆರಳಲ್ಲಿ ಆ ಜೀವ್‍ಗಾಡಲ್ಲಿ ಕೂತರೆ ಬದುಕು
ಕೇಳುತ್ತಿರಲಿಲ್ಲ. ನೂರೆಂಟು ತರಲೆ ತಾಪತ್ರಯಗಳಿಂದ ಊರಿಗೆ ನಾನು ಹೋಗುವುದೇ
ದುಸ್ತರವಾಗಿಬಿಟ್ಟಿತ್ತು. ಈಗ ಊರಲ್ಲಿ ನನ್ನ ಮಾತಿಗೆ ಬಿಡಿಗಾಸಿನ ಬೆಲೆಯೂ ಇರಲಿಲ್ಲ. ಮರದ
ಸಾಕ್ಷಿಗಳಿಗೆ ತೂತುಕಾಸಿನಷ್ಟು ಕಿಮ್ಮತ್ತಿರಲಿಲ್ಲ. ನಮ್ಮ ಆ ಸ್ಮಶಾನದಲ್ಲಿ ಹರಿಯುತ್ತಿದ್ದ
ಜೀವನಾಡಿಯಂತಹ ಹಳ್ಳಿ ಬತ್ತುತ್ತಿದೆ ಎಂಬ ಸುದ್ದಿ ಬಹಳ ಹಿಂದೆಯೇ ನನ್ನ ಗಮನಕ್ಕೆ ಬಂದಿತ್ತು.
ಯಾವಾಗಲೋ ಒಮ್ಮೆ ನಮ್ಮ ಆ ಸ್ಮಾಶನದ ಬಗ್ಗೆ ಒಂದು ಕೆಟ್ಟ ಕನಸು ಕಂಡಿದ್ದೆ. ಆಗ ಬಹಳ ಭಯವಾಗಿತ್ತು.
ಹೀಗೇ ಒಂದು ರಾತ್ರಿ ಆ ಸ್ಮಾಶನದಲ್ಲಿ ಇದ್ದ ಸುಂದರ ತಾವರೆ ಕೊಳದ ತುಂಬ ನೆತ್ತರ ನೀರು
ತುಂಬಿಹೋಗಿತ್ತು. ಈ ಹಿಂದೆ ಆ ಪನ್ನೀರ ಕೊಳದಲ್ಲಿ ಗಂಟೆಗಟ್ಟಲೆ ನಾನು ನನ್ನ ಅವಮಾನದ ಹಸಿವಿನ
ಕ್ಷಣಗಳ ಹೇಳಿಕೊಂಡು ಮೌನವಾಗಿ ರೋಧಿಸುತ್ತಾ ಕುಳಿತುಬಿಡುತ್ತಿದ್ದೆ. ಅಂತಹ ಆ ಒಂದು ಕೊಳದಲ್ಲಿ
ಹಳದಿ ಬಿಳಿ ಕಂದು ಕೆಂಪು ವರ್ಣದ ತಾವರೆ ಮೊಗ್ಗುಗಳು ಮಕ್ಕಳ ಕೈಗಳಂತೆ ಮೇಲೆದ್ದು ಬಂದು ಕೈಬೀಸಿ
ಕರೆಯುತ್ತಿದ್ದವು. ಆ ತರದ ಪುಷ್ಖರಣಿಯ ತುಂಬ ನೆತ್ತರು ಎಂದರೆ ನನ್ನ ಹೃದಯ ಒಡೆದು ಹೋದಂತಾಗಿತ್ತು.
ಕರ್ಕಶವಾಗಿ ಯಾರೋ ಮಹಾ ಅಧಿಕಾರಿ ವರ್ಗದವರು ಹದ್ದಿನಂತೆ ಕೂಗುತ್ತಾ ಬಾಯಿ ತೆರೆದು ಕೋರೆಹಲ್ಲುಗಳ
ಜಳಪಿಸಿದಂತಾಗಿ ಆ ಕನಸಿನ ದವಡೆ ಹಲ್ಲಿಗೆ ಸಿಲುಕಿ ಜಜ್ಜಿ ಹೋದಂತಾಗಿ ಎಚ್ಚರವಾಗಿ ಕೂಗಿಕೊಂಡಿದ್ದೆ.
ನನ್ನ ಹೆಂಡತಿ ಯಾವತ್ತೂ ನನ್ನ ಇಂತಹ ಭೀತಸ್ತ ಕನಸುಗಳಿಗೆ ರೋಸಿಹೋಗಿದ್ದವಳು ತೆಪ್ಪಗೆ ಮಲಗಿದ್ದಳು.
ಮತ್ತೆ ಯಾವಾಗಲೋ ನನ್ನವರಾರೋ ಸತ್ತಿದ್ದಾಗ ಊರಿಗೆ ಆ ಸ್ಮಶಾನಕ್ಕೆ ಹೋಗಿದ್ದಾಗ ಆ ಕೊಳವನ್ನು ನೋಡಿ
ಸಮಾಧಾನಗೊಂಡಿದ್ದೆ. ಆಗಲೂ ಬಗೆಬಗೆಯ ಹೂಗಳು ಅಲ್ಲೆಲ್ಲ ಚೆಲ್ಲಿದ್ದವು. ಕೊಳ ನಾಶವಾಗಿರಲಿಲ್ಲ.
ಹಾಗೇ ಅದೇ ಚೆಲುವಿನಲ್ಲಿ ಮೆಲ್ಲಗೆ ಹಳ್ಳ ಹರಿಯುತ್ತಿತ್ತು. ನಗರದ ಜಂಜಡದ ಜೀವನ ಶೈಲಿಯಿಂದಾಗಿ
ಅಂತಹ ವಿಚಿತ್ರ ಕನಸು ಬಿದ್ದಿರಬೇಕೆಂದು ಸುಮ್ಮನಾದೆ. ಆದರೂ ನನ್ನ ಕನಸಿನ ಊರನ್ನು ಏನು ಮಾಡಿದರೂ
ಮರೆಯಲು ಆಗುತ್ತಿರಲಿಲ್ಲ. ಒಂದಲ್ಲ ಹತ್ತಾರು ರೀತಿಯಲ್ಲಿ ಅಲ್ಲಿನ ಘಟನೆಗಳಿಗೂ ನನಗೂ ಏನೋ ಒಂದು
ಕಳ್ಳು ಬಳ್ಳಿಯ ಸಂಬಂಧ ಬೆರೆತು ಹೋಗಿ ಸುಮ್ಮನಿರಲು ಬಿಡುತ್ತಿರಲಿಲ್ಲ. ಊರಲ್ಲಿ ಮನೆಯವರಿಗೂ ನನಗೂ
ಆಗಾಗ ಅನೇಕ ಕಾರಣಗಳಿಂದಾಗಿ ಜಗಳ ಬೆಳೆಯುತ್ತಲೇ ಇತ್ತು. ನಮ್ಮ ತಾತ ತೀರಿಹೋದ ಮೇಲೆ ಊರಿನ ಕಡೆ ತಲೆ
ಹಾಕಿ ಮಲಗಲೂ ಬೇಸರವಾಗುತ್ತಿತ್ತು. ನಮ್ಮೆಲ್ಲರನ್ನೂ ಸಾಕಿ ಸಲಹಿ ದೊಡ್ಡವರನ್ನಾಗಿ ಮಾಡಿದ್ದರ
ನೆನಪಿಗಾಗಿ ತಾತನ ಋಣ ತೀರಿಸುವ ಬಗ್ಗೆ ತಿಥಿ ದಿನವೇ ನಾನೊಂದು ಸಲಹೆಯನ್ನು ಮನೆಯಲ್ಲಿ
ಇಟ್ಟೆ.ಊರಲ್ಲಿ ಇಷ್ಟೆಲ್ಲ ಮರಗಳಿವೆ, ಇವುಗಳಲ್ಲಿ ತಾತನ ಹೆಸರಿನ ಮರಗಳು ಯಾವುವೂ ಇಲ್ಲ. ನಾವು ಐದು
ಮರಗಳನ್ನು ಅವನ ನೆನಪಿಗಾಗಿ ನೆಟ್ಟು ಬೆಳೆಸುವಾ ಎಂದಿದ್ದೆ. ತಿಥಿಯ ನೆಂಟರ ಬಳಗದ ಎದಿರು ನನ್ನ
ಚಿಕ್ಕಪ್ಪಂದಿರು ಬಹಳ ಹಗುರವಾಗಿ ನನ್ನ ಮಾತನ್ನು ತೆಗೆದುಕೊಂಡು ‘ಇಂತಹ ಹುಚ್ಚು ಯೋಜನೆಗಳನ್ನು
ಹಾಕುವುದರಲ್ಲಿ ನಿನ್ನಂತಹ ನಿಸ್ಸೀಮ ಈ ಪ್ರಪಂಚದಲ್ಲೇ ಇಲ್ಲ’ ಎಂದು ಗೇಲಿ ಮಾಡಿದರು. ದೊಡ್ಡ ದೊಡ್ಡ
ಅಧಿಕಾರಿಗಳಾಗಿ ನಗರ ಸೇರಿದ್ದ ನಮ್ಮ ಮನೆಯ ಅನೇಕರ ಎದಿರು ನನ್ನ ಮಾತುಗಳೆಂದೂ ನಡೆಯುತ್ತಿರಲಿಲ್ಲ.
ನನ್ನನ್ನು ಲಕ್ಕಕ್ಕೆ ತೆಗೆದುಕೊಳ್ಳದೇ ಎಲ್ಲ ನಿರ್ಣಯಗಳನ್ನೂ ತೆಗೆದುಕೊಳ್ಳುತ್ತಿದ್ದರು. ತಾತನ
ಆಸ್ತಿ ಹಂಚಿಕೆಯಲ್ಲಿ ನನಗೂ ಒಂದಿಷ್ಟು ಬರುವುದಿತ್ತು. ಆಗಿನಿಂದಲೂ ಬೆಳೆಸಿದ್ದ ಅ ಹೆಮ್ಮರಗಳನ್ನು
ಕಡಿದು ಮಾರಿಕೊಳ್ಳುವ ಬಗ್ಗೆ ತಿಥಿ ಊಟದ ನಂತರ ಮನೆಯಲ್ಲಿ ಗದ್ದಲವೇರ್ಪಟ್ಟು ಕಿತ್ತಾಟ
ಖೂನಿಗಳಾಗುವಷ್ಟರ ಮಟ್ಟಿಗೆ ಬೆಳೆದು ನನ್ನ ತಲೆ ಕೆಟ್ಟುಹೋಗಿ ನಾನೂ ಜಗಳದಲ್ಲಿ ಮುಳುಗಿ
ಅವರೆಲ್ಲರಿಂದ ಸಾಕಷ್ಟು ಏಟು ತಿಂದು ಇನ್ನು ಈ ಊರಿನ ಸಹವಾಸವೇ ಬೇಡ ಎಂದು ನನ್ನ ಪುಟ್ಟ
ಸಂಸಾರವನ್ನು ಕಟ್ಟಿಕೊಂಡು ಪೇಟೆಗೆ ಹಿಂತಿರುಗಿಬಿಟ್ಟಿದ್ದೆ.ಬರುವ ಮುನ್ನ ನನ್ನ ಬಾಲ್ಯಾಕಾಲದ ಆ
ಎಲ್ಲ ಜಾಗಗಳನ್ನೂ ಒಮ್ಮೆ ಸುತ್ತಿ ಬಂದಿದ್ದೆ. ನಮ್ಮ ಪೂರ್ವಿಕರ ನೆನಪಿಗೆ ಬಾಳಿಗೆ ಸಾಕ್ಷಿಯಂತಿದ್ದ
ಮರಗಳನ್ನು ಕಡಿದು ಮಾರಿಕೊಂಡು ಮಜಾ ಮಾಡುವ ಬಗ್ಗೆ ಕಿಂಚಿತ್ತು ನನ್ನಲ್ಲಿ ಆಸೆ ಇರಲಿಲ್ಲ. ಪೇಟೆ
ಸೇರಿಕೊಂಡು ಕಾಲ ನೂಕಿದಂತೆಊರಿನ ಬಂಧುಬಳಗದ ಬಗ್ಗೆ ನನಗೆ ಅಸಹ್ಯ ಹುಟ್ಟಿಕೊಂಡಿತ್ತು. ಅನೇಕ
ಮರಗಳನ್ನು ಕಡಿದುರುಳಿಸಿದರೆಂದು ಸುದ್ದಿ ಬಂದಾಗ ನಾನೇನೂ ಮಾಡುವಂತಿರಲಿಲ್ಲ. ಅಜ್ಜಿಯ ಬಿಲ್ಪತ್ರೆ
ಮರವೂ ನನ್ನವ್ವ ಬೆಳೆಸಿದ್ದ ಸಂಪಿಗೆ ಮರವೂ ನನ್ನ ಪ್ರಜ್~ಝೆಗೆ ಬಂದು ಕಾಡಿದರೂ ಅಲ್ಲಿಗೆ ಹೋಗಿ
ಮತ್ತೆ ಮತ್ತೆ ಅವಮಾನಿತನಾಗಿ ಬರುವುದು ಹೇಗೆಂದು ತಲ್ಲಣಗೊಳ್ಳುತ್ತಿದ್ದೆ.
ಈ ನಡುವೆ ನಮ್ಮ ಕೇರಿಯ ಕೆಲವು ಯುವಕರು ಕಾಲೇಜು ಮುಂದುವರಿಸಲಾಗದೆ ಊರಲ್ಲೇ ಉಳಿದು ಮಾಡಲು ಏನೊಂದೂ
ಕೆಲಸವಿಲ್ಲದಿದ್ದಾಗ ಯುವಕ ಸಂಘವೊಂದನ್ನು ಕಟ್ಟುವ ಸಾಹಸಕ್ಕಿಳಿದಿದ್ದರು. ದೀನ ಸೇವಾ ಸಂಘ ಎಂದು
ಒಂದು ನಾಮಕರಣ ಮಾಡಿ ಬೋರ್ಡು ಬರೆಸಿ ಸರ್ಕಲ್ಲಿನ ಬಳಿಯ ಒಂದು ಕೊಠಡಿಯ ಹಿಡಿದು ಅದರ ಮುಂದೆ ಆ
ಬೋರ್ಡು ತಗುಲಾಕಿ ಆ ಯುವಕರೆಲ್ಲ ಗುಂಪುಗುಂಪಾಗಿ ಅಲ್ಲಿ ನೆರೆದು ನೂರಾರು ನೀಲಿ ನಕ್ಷೆಗಳ ತಯಾರಿಸಿ
ಯಥೇಚ್ಛವಾಗಿ ಹರಟೆಯಲ್ಲಿ ಮುಳುಗಿ ಸಮಾಜ ಸುಧಾರಣೆಯ ಕ್ರಾಂತಿ ಪದಗಳ ಊರುತುಂಬ ಅಪ್ಪಳಿಸುವಂತೆ
ಮೊಳಗಿಸಿ ಹಗಲು ರಾತ್ರಿಗಳನ್ನು ಅಲ್ಲೇ ಅರೆದು ಹಾಕುವವರಂತೆ ಸಂಘಟಿತರಾದರು. ಕ್ರಾಂತಿ ಕಹಳೆಯ
ತಾಲೀಮು ನಡೆಸುವ ರಂಗಸಜ್ಜಿಕೆಯಲ್ಲಿ ತರಾವರಿ ರಂಗು ಚೇಷ್ಟೆಗಳಲ್ಲಿ ಮುಳುಗತೊಡಗಿದರು.
ಸರ್ಕಲ್ಲಿನಲ್ಲೇ ಇದ್ದ ಸಾರ್ವಜನಿಕ ಬೋವೆಲ್ ಬಳಿ ನೀರಿಗೆ ಬರುವ ಹೆಂಗಸರು ಬೋರ್ ಒತ್ತುವ
ಭಂಗಿಯನ್ನೇ ತಾನು ಮೊದಲು ಎಂಬಂತೆ ಸ್ಪರ್ಧಾತ್ಮಕವಾಗಿ ಬಿರುಗಣ್ಣಿನಿಂದ ದಿಟ್ಟಿಸುತ್ತಾ ಉಡಾಳರಾಗಿ
ಕಿಚಾಯಿಸುತ್ತ ಆಗಾಗ ಕ್ರಾಂತಿಯ ಕನಸುಗಳನ್ನು ಕುಣಿಸುತ್ತಾ ಅಲ್ಲೇ ಜಾಂಡಾ ಹೂಡುತ್ತಿದ್ದರು.
ಹುಡುಗಿಯರು ಅವರ ಅಂಗ ಚೇಷ್ಟೆಗಳಿಗೆ ಸೊಪ್ಪುಹಾಕದೆ ಸುಮ್ಮನಿದ್ದರು.
ಆದರೆ ಇಂತಹ ಹೊತ್ತಿನಲ್ಲೇ ಮುಂದಾಗಬಹುದಿದ್ದ ದುರಂತಕ್ಕೆ ಒಂದು ಚಿಕ್ಕ ಮೊಳಕೆಯಾಕಾರದ ಐಡಿಯಾವೊಂದು
ಆ ತಲೆಹರಟೆ ಮಲ್ಲನೊಬ್ಬನಿಗೆ ಹೊಳೆದು ತಾಯವ್ವನ ಇಡ್ಲಿ ಅಂಗಡಿಯ ಮೇಲೆ ಕಣ್ಣುಬಿತ್ತು. ಆ ತಯವ್ವನ
ಅಂಗಡಿ ಇಡೀ ಊರಲ್ಲೆಲ್ಲ ಪ್ರಖ್ಯಾತಿ ಪಡೆದು ಊರಿಗೆ ಊರೇ ಅವಳ ತಟ್ಟೆ ಇಡ್ಲಿಗೆ ಮಾರುಹೋಗಿತ್ತು.
ಕಾಲಾಂತರದಿಂದಲೂ ಹೋಟೆಲ್ ಹೊರಗೇ ನಿಲ್ಲಸಿ ತಿಂಡಿ ಕೊಟ್ಟು ಅವಮಾನ ಮಾಡುವುದರ ವಿರುದ್ಧ ನಾವು
ಸಂಘಟಿತರಾಗಿ ಆ ಹೋಟೆಲ್ ಒಳಕ್ಕೆ ಪ್ರವೇಶ ಮಾಡುವ ಕಾರ್ಯಕ್ರಮ ಇಟ್ಟುಕೊಳ್ಳಬೇಕೆಂದು ಒಂದೇ
ಕ್ಷಣದಲ್ಲಿ ಆ ಎಲ್ಲ ಯುವಕರು ಒಕ್ಕೊರಲಿನ ಏಕಾಭಿಪ್ರಾಯಕ್ಕೆ ಬಂದು ಈತನಕ ಇಂತಹ ಐನಾತಿ ಐಡಿಯಾ ತಮಗೆ
ಹೊಳೆದೇ ಇರಲಿಲ್ಲವಲ್ಲಾ ನಾವೆಂತಹ ಮಂಕುಬೂದಿಗಳೆಂದು ಶಪಿಸಿಕೊಳ್ಳುತ್ತಾ ಮುಂದಿನ ವಾರದಲ್ಲೇ
ಎಲ್ಲವೂ ಸಾಂಗವಾಗಿ ಆಗಿ ಊರಲ್ಲಿ ಹೊಸದೊಂದು ಕ್ರಾಂತಿ ಅಲೆಯನ್ನು ಎಬ್ಬಿಸಿಬಿಡಬೇಕೆಂದು
ತರಾತುರಿಯಿಂದ ಎದ್ದು ನಿಂತರು.
ತಾಯವ್ವನ ಇಡ್ಲಿ ರುಚಿಯ ಜೊತೆಗೆ ಅವಳ ಬಗ್ಗೆ ರಂಗುರಂಗಿನ ಕಥೆಗಳೂ ಪುಂಡುಡುಗರ ಬಾಯಲ್ಲಿ ಆಗಾಗ
ಬಂದು ನೀರು ಸುರಿಸುತ್ತಿದ್ದವು. ಹಣ್ಣುಗುಂಬಳಕಾಯಂತಹ ಅವಳ ಮೈ ಮೇಲೆ ಅನೇಕರಿಗೆ ಕಣ್ಣಿದ್ದರೂ ಆಕೆ
ಎಲ್ಲರಿಗೂ ಸುಲಭವಾಗಿ ‘ಶೋ’ ಕೊಡುತ್ತಿರಲಿಲ್ಲ. ಹೋಟೆಲಲ್ಲಿ ಕಾಯಂ ಆಗಿ ಬಂದು ಯಥೇಚ್ಚವಾಗಿ ತಿಂದು
ಗರಿಗರಿಯಾದ ನೋಟುಗಳನ್ನು ಜೇಬಿಂದ ಬಿಚ್ಚುವವರಿಗೆ ಮಾತ್ರ ಸ್ಪೆಷೆಲ್ ಆಗಿ ತನ್ನ ನಿತಂಬಗಳನ್ನು
ಒಮ್ಮೆ ಝಳಪಿಸಿ ಸ್ವಲ್ಪವೇ ಸ್ವಲ್ಪ ಸೀರೆ ಸೆರಗ ಮರೆಯಲ್ಲಿ ಬಲಿತು ಹಣ್ಣಾಗಿದ್ದ ದಡು ಮೊಲೆಗಳನ್ನು
ಕ್ಷಣಮಾತ್ರದಲ್ಲಿ ಹಾಗೆ ತೋರಿಸಿ ಹೀಗೆ ಮಾಯಮಾಡಿ ಮೋಡಿ ಹಾಕುತ್ತಿದ್ದಲು. ಸಣ್ಣಪುಟ್ಟ
ಗಿರಾಕಿಗಳಿಗೆ ಅಮಾಸೆಗೊ ಹುಣ್ಣಿಮೆಗೊ ಎಂಬಂತೆ ಒಂದು ತೆಳುನಗೆಯನ್ನು ಅವರ ಮುಖದಮೇಲೆ ಬಿಸಾಡಿ
ಇನ್ನಾರನ್ನೋ ನೋಡಿ ಅವರಾರಿಗೋ ಶೋ ಕೊಡುವ ಬಿರುಸಿನಲ್ಲಿ ಯಾರು ಯಾರಿಗೆ ಆಕೆ ಏನನ್ನು
ಕೊಟ್ಟಳೆಂಬುದೇ ಲೆಕ್ಕಕ್ಕೆ ಸಿಗುತ್ತಿರಲಿಲ್ಲ. ಅದರಲ್ಲೂ ನಮ್ಮ ಕೇರಿಯವರು ನಾಸ್ಟ ಮಾಡಲು ಹೋದರೆ
ಏನೇನೋ ಮಾತಾಡಿ ತಿಂಡಿಕೊಡುವುದನ್ನೇ ಒಂದು ವರ್ಷ ಮಾಡಿ ಸಾಲ ಸತ್ತರೂ ಸಿಗುವುದಿಲ್ಲ ಎಂದು
ಸಿಡಿಮಿಡಿಗೊಂಡು ನಿಮ್ಮಂತಹ ಗಿರಾಕಿಗಳಿಗೆ ಇಲ್ಲಿ ಜಾಗ ಇಲ್ಲ ಎಂಬಂತೆ ವರ್ತಿಸುತ್ತಿದ್ದಳು.
ಹೊರಗಡೆ ಮೋಟುಗೋಡೆಯ ಮೇಲೆ ಕುಳಿತು ನಮ್ಮವರು ತಾಯವ್ವನ ಗೊಣಗಾಟವನ್ನು ಸಹಿಸುತ್ತ ಇಡ್ಲಿ ದೋಸೆಗಳ
ಅಮಲಲ್ಲಿ ಮೂರ್ಛೆ ಬಂದವರಂತೆ ಆಡುತ್ತಾ ಜೇಬಿನಿಂದ ಕಾಸು ತೆಗೆದು ‘ನೋಡ್ರವ್ವಾ’ ಕಾಸದೆಕನಾ ತಿಂಡಿಯ
ಕೊಡ್ರವ್ವಾ’ ಎಂದು ಕೇಳುತ್ತಿದ್ದರು.
ಇಂತಹ ಸ್ಥಿತಿಯಲ್ಲಿ ಹೋಟೆಲಿಗೆ ಪ್ರವೇಶ ಪಡೆಯಲು ಹಿನ್ನೆಲೆಯಾಗಿ ಇನ್ನೂ ಒಂದು ಮಹತ್ತರವಾದ
ಕಾರಣವಿತ್ತು. ತಾಯವ್ವನ ರೂಪರಾಶಿಯನ್ನು ಒಂದೇ ಏಟಿಗೆ ಹೊಡೆದು ಹಾಕುವಂತೆ ಅವಳ ಮಗಳು ಊರ್ವಶಿ
ಬೆಳೆದು ಮೈದುಂಬಿ ನಿಂತಿದ್ದಳು. ಹೆಸರಿಗೆ ತಕ್ಕಂತೆ ಅವಳು ವರ್ತಿಸುತ್ತಿದ್ದಳು. ಊರಿನ
ಪ್ರತಿಷ್ಠಿತ ಗಿರಾಕಿಗಳಿಗೆ ಮಾತ್ರ ಆಕೆ ತಿಂಡಿ ಕೊಡುತ್ತಿದ್ದುದು. ಸಾಧಾರಣ ಜನಗಳನ್ನು ಅವಳು
ಯಕಶ್ಚಿತ್ ಎಂಬಂತೆ ಅವಳು ಉಪೇಕ್ಷಿಸುತ್ತಿದ್ದಳು. ದಿನದ ಬಹುಪಾಲು ವೇಳೆಯನ್ನು ರೇಡಿಯೋ ಸಂಗದಲಿ
ಕಳೆಯುತ್ತಾ ಸಿಲೋನ್ ಸ್ಪೆಷಲ್‍ನಲ್ಲಿ ಪ್ರಸಾರವಾಗುವ ತರತರದ ಹಿಂದಿ ಹಾಡುಗಳಲ್ಲಿ ಮೈಮರೆಯುತ್ತಾ
ಯಾರಿಗಾಗಿಯೋ ಕಾಯುವ ಶ್ವೇತ ಸುಂದರಿಯಂತೆ ವಿರಹದುಂಗುರವ ಕಳೆದುಕೊಂಡವಳಂತೆ ಒಳಮನೆಯ ಪುಟ್ಟ
ಕೋಣೆಯಲ್ಲಿ ಗುನುಗುತ್ತಾ ಕೂತುಬಿಡುತ್ತಿದ್ದಳು. ತನ್ನ ಮಗಳ ಸೌಂದರ್ಯದ ಭಂಡಾರಕ್ಕೆ ಯಾರಾದರೂ
ಕೈಹಾಕಿಬಿಟ್ಟಾರೆಂದು ತಾಯವ್ವ ಹೆದರಿ ಅದನ್ನು ತಪ್ಪಿಸುವ ತಂತ್ರವಾಗಿ ತಾನೇ ತನ್ನ ದೇಹವನ್ನು
ಕೇಡುಗಣ್ಣುಗಳಿಗೆ ಅಡ್ಡವಾಗಿ ತಂದು ಮಗಳನ್ನು ಕಾಯುತ್ತಿದ್ದಳು. ನಮ್ಮ ಕೇರಿಯ ಹುಡುಗರು ಆ
ಊರ್ವಶಿಯಿಂದ ಒಮ್ಮೆಯಾದರೂ ಸ್ವತಃ ಅವಳ ಕೈಯಿಂದಲೇ ತಿಂಡಿ ಪಡೆದು ತಿನ್ನಬೇಕೆಂದು ಬಹಳ ದಿನಗಳಿಂದ
ಗುಂಪಾಗಿ ಕನಸು ಕಾಣುತ್ತಿದ್ದರು. ಅಂತಹ ಚೆಲುವಾದ ಎಳೆಬಾಳೆಸುಳಿಯಂತಹ ತರುಣಿ ಅವಳು ಈ ಹುಡುಗರತ್ತ
ಒಮ್ಮೆಯಾದರೂ ಕಣ್ಣೆತ್ತಿ ನೋಡಿದ್ದಕ್ಕೆ ಯಾರ ಬಳಿಯೂ ರವಷ್ಟಾದರೂ ಸುಳಿವು ಇಲ್ಲದೇ ಎಂತದೇ
ಸಾಕ್ಷಿಯೂ ಇರಲಿಲ್ಲ. ಅವಳು ಮಾತನಾಡಿದರೇ ಲತಾಮಂಗೇಶ್ಕರ್ ಹಾಡಿದಂತೆ ಕೇಳಿಸುತ್ತದೆಂದು
ಸರ್ವಾನುಮತದಿಂದ ಎಲ್ಲರೂ ಒಪ್ಪಿಕೊಂಡಿದ್ದರು. ಹೇಗಾದರೂ ಮಾಡಿ ಅವಳ ಪ್ರೇಮವನ್ನು ತಮ್ಮಲ್ಲಿ
ಯಾರಾದರೂ ಪಡೆದೇ ತೀರಬೇಕೆಂಬ ಶಪಥಮಾಡಿ ದಣಿದುಹೋಗಿದ್ದರು. ಹತಾಶರಾಗಿ ಕೊನೆಪಕ್ಷ ಅವಳನ್ನು ಕದ್ದು
ಅಪಹರಿಸಲೂ ಆಗದೆಂದು ನಿರ್ಧರಿಸಿ ಎಲ್ಲಿಯಾದರೂ ಅವಳು ನಮಗೆ ಸಿಗಲೇಬೇಕಾಗುತ್ತದೆ. ಆಕೆ ಎಲ್ಲಿ
ಯಾವಾಗ ಬಹಿರ್ದೆಸೆಗೆ ಹೋಗುತ್ತಾಳೋ ಅಲ್ಲಾದರೂ ಕದ್ದು ಕುಳಿತು ಅವಳ ಭಂಗಿಯನ್ನು ನೋಡಿಯಾದರೂ
ಸಮಾಧಾನ ಪಟ್ಟುಕೊಳ್ಳುವ ಎಂದು ಯಾವನೋ ಒಬ್ಬ ತಲೆಪಾತಕ ನಿರ್ಣಯವನ್ನು ಮಂಡಿಸಿದ. ಧಿಡೀರನೆ ಆ
ಸಲಹೆಗೆ ಒಪ್ಪಿದ ಕೆಲವು ಸದಸ್ಯರು ಕಾರ್ಯಪ್ರವೃತ್ತರಾಗಿಬಿಟ್ಟರು. ಸಂಘದ ಸದಸ್ಯರಲ್ಲಿ ಇದರ
ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚೆಯೂ ನಡೆದು ಈ ಒಂದಂಶದ ಯೋಜನೆಯ ಮೇರೆಗೆ ಕೆಲವರು ಕೋಳಿ ಕೂಗುವ
ಹೊತ್ತಿಗೇ ಎದ್ದು ಹೊಳೆ ದಂಡೆಯ ಬೇಲಿ ಮರೆಗೆ ಹೋಗಿ ಕುಳಿತು ಊರ್ವಶಿ ಬರುವುದನ್ನೇ ಕಾದು ಕಾಣದೆ
ಬೇರೆ ಬೇರೆ ಸ್ಥಳಗಳಲ್ಲಿ ನೋಡಿ ಕೊನೆಗೂ ಯಾರದೊ ದರ್ಶನ ಪಡೆಯಲು ಯಶಸ್ವಿಯಾದರು. ಯಾವುದಾವುದೋ
ಮುದುಕಿ ಮೋಟಿಯರ ನರೆತು ಜಿಬರಿಡಿದು ಮುದಿಯಾದ ಹಿಂಬದಿ ಕುಂಡಿಗಳನ್ನು ನೋಡಿ ಅವರು ಕಕ್ಕಸ್ಸಿಗೆ
ಕೂರುವ ಆ ಭಂಗಿಯನ್ನೇ ಕಂಡು ಹೇಸಿಗೆ ಪಟ್ಟುಕೊಂಡು, ಆ ಊರ್ವಶಿಯ ದರ್ಶನವಾಗುತ್ತದೆಂದರೆ ನಮಗೆ
ಇಲ್ಲೂ ಇಂತಹ ಅನ್ಯಾಯವಾಗುತ್ತದಲ್ಲಾ ಎಂದು ವಿಪರೀತ ಬೇಸರ ಮಾಡಿಕೊಂಡು ಇನ್ನೆಂದೂ ಹೆಂಗಸರ
ಮುಕುಳಿಯನ್ನು ಯಾವ ಭಾಗ್ಯ ಬಂದರೂ ನೋಡುವುದಿಲ್ಲ ಎಂದು ಹಿಂದಿರುಗಿ ಬಂದು ಆ ಅಂಡು ದರ್ಶನದ
ಕಾರ್ಯಕ್ರಮವನ್ನೇ ರದ್ದುಗೊಳಿಸಿದರು.
ಊರ್ವಶಿಗೆ ನಮ್ಮ ಕೇರಿಯ ಹುಡುಗರನ್ನು ಕಂಡರೇ ಆಗುತ್ತಿರಲಿಲ್ಲ. ಇವರಾದರೋ ಒಂದೇ ಬಾರಿಗೆ ಗುಂಪಾಗಿ
ಅವಳಿಗೆ ಕಣ್ನು ಮಿಟುಕಿಸುತ್ತಿದ್ದರು. ಪ್ರತಿಯೊಬ್ಬನೂ ತಾನೊಬ್ಬನೇ ಯಾರಿಗೂ ಕಾಣದಂತೆ ಪ್ರೇಮ
ಸನ್ನೆಯನ್ನು ಆಕೆಗೆ ಕೊಡುತ್ತಿದ್ದೇನೆಂದು ಭಾವಿಸಿ, ಒಂದೇ ರೀತಿಯಲ್ಲಿ ಹಲ್ಲರಳಿಸುತ್ತಿದ್ದರು.
ಹೆಚ್ಚುಕಡಿಮೆ ಎಲ್ಲರೂ ಒಂದೇ ರೀತಿಯಲ್ಲಿ ಅಥವಾ ಒಬ್ಬ ಬರೆದದ್ದನ್ನೇ ಇನ್ನೊಬ್ಬ ಓದಿಕೊಂಡು ಕಾಫಿ
ಹೊಡೆದು ಒಂದೇ ಜಾಗದಲ್ಲಿ ಅದೇ ಸಂಘದ ಕಛೇರಿಯಲ್ಲಿ ತಾಯವ್ವನ ಮಗಳಿಗೆ ಪ್ರೇಮಪತ್ರವನ್ನು ಬರೆದು
ಅದನ್ನೆಲ್ಲ ಒಟ್ಟುಮಾಡಿಯಾರಾದರೂ ಒಬ್ಬರು ಹೋಗಿ ಆಕೆಗೆ ತಲುಪಿಸಿದರಾಯಿತು ಎಂದು ಲೆಕ್ಕ
ಹಾಕುತ್ತಿದ್ದರು. ಹಾಗೆ ಬರೆದ ಎಲ್ಲ ಪ್ರೇಮ ಪತ್ರಗಳನ್ನೂ ಯಾವನೋ ಒಬ್ಬ ತನ್ನ
ಜೇಬಿನಲ್ಲಿಟ್ಟುಕೊಂಡು ಅದನ್ನೇ ಒಂದು ಆನಂದವಾಗಿ ಸವಿಯುತ್ತಾ ತಾನು ಅವಳೊಂದಿಗೆ ರತಿ ಪ್ರಲಾಪದಿಂದ
ಆಕರ್ಷಿಸುತ್ತಿರುವೆನೆಂದು ಭಾವಿಸುತ್ತ ಆಕೆ ಈ ಎಲ್ಲ ಪ್ರೇಮ ಪತ್ರಗಳಲ್ಲೂ ನನ್ನದನ್ನು ಮಾತ್ರ
ಮೆಚ್ಚಿ ಬೇಟಕ್ಕೆ ಕರೆಯುತ್ತಾಳೆಂದು ಸಂಭ್ರಮಿಸುತ್ತಿದ್ದ. ಹೀಗೆ ಒಬ್ಬೊಬ್ಬನೂ ಒಂದೊಂದು ವಾರದ ತನಕ
ಆ ಪ್ರೇಮ ಪತ್ರಗಳ ಕಟ್ಟನ್ನು ತಮ್ಮ ಜೇಬುಗಳಲ್ಲಿ ಜೋಪಾನವಾಗಿಟ್ಟುಕೊಂಡು ಪ್ರೇಮವನ್ನು ಮಾಡದೆಯೇ
ವಿರಹದಿಂದ ಬಳಲುತ್ತಿದ್ದರು. ಅವನ್ನು ಯಾಯಾರಿಗೋ ಸಿಟ್ಟಾಗಿ ಓದಿ ಹೇಳಿ ಗುಟ್ಟಾಗಿ ಪ್ರಚಾರ
ಮಾಡಿಕೊಂಡು ಈ ವಿಷಯವನ್ನು ಗೌಪ್ಯವಾಗಿಡಬೇಕೆಂದು ಬೀದಿಯಲ್ಲಿ ಎಲ್ಲರ ಜೊತೆ
ಹೇಳಿಕೊಳ್ಳುತ್ತಿದ್ದರು.
ಆದರೆ ಯಾರೊಬ್ಬರೂ ಆ ಅನಾಥ ಪ್ರೇಮ ಪತ್ರಗಳನ್ನು ಊರ್ವಶಿಗೆ ತಲುಪಿಸಲು ಸಾಧ್ಯವಾಗುತ್ತಿರಲಿಲ್ಲ.
ಅಷ್ಟೂ ದಿನಗಳತನಕ ಆ ಪತ್ರಗಳು ಹತ್ತಾರು ಕೈಗಳಲ್ಲಿ ಓಡಾಡಿ ಸವೆದು ಹರಿದು ತುಂಡಗುವ ಮಟ್ಟಕ್ಕೆ
ಬಂದಾಗ ಮತ್ತೆ ಆಸಕ್ತಿ ಉಳಿಸಿಕೊಂಡವರೆಲ್ಲ ಒಂದಾಗಿ ಮತ್ತೆ ಪ್ರತ್ಯೇಕ ಪ್ರೇಮ ಪತ್ರಗಳನ್ನು ಬರೆದು
ಯಥಾಪ್ರಕಾರ ಯಾರು ಇದನ್ನು ಆಕೆಗೆ ತಪುಲಿಸಬೇಕೆಂದು ಜಿಜ್~ಝಾಸೆಗೆ ಬೀಳುತ್ತಿದ್ದರು. ಕೊನೆಗೊಂದು
ದಿನ ಐನಾತಿ ಐಡಿಯಾ ಮಾಡಿ ಈ ಪತ್ರಗಳನ್ನು ಯಾವನಾದರೂ ಒಬ್ಬ ಸಣ್ಣ ಹುಡುಗನ ಮುಖಾಂತರ ಆಕೆಗೆ
ತಲುಪಿಸಿದರಯಿದೆಂದು ತೀರ್ಮಾನಿಸಿ ಈವರೆಗೆ ತಮಗೆ ಈ ಯೋಚನೆಯೇ ಹೊಳೆಯದಿದ್ದಕ್ಕೆ ತಮ್ಮ ಬಗ್ಗೆಯೇ
ಸಿಟ್ಟುಗೊಂಡು, ಮೊದಲೇ ಈ ಉಪಾಯ ತಿಳಿದಿದ್ದರೆ ಇಷ್ಟು ಹೊತ್ತಿಗೆ ಊರ್ವಶಿ ತಮ್ಮಲ್ಲಿ ಯಾರಿಗಾದರೂ
ಒಲಿದು ಪ್ರೇಮೆ ಬೆಳೆದು ಅನಂತರ ಅದು ವಿಫಲಗೊಂಡು ಮತ್ತೆ ಆಕೆ ನಮ್ಮ ಗುಂಪಿನಲ್ಲೇ ಇರುವ
ಇನ್ನೊಬ್ಬನಲ್ಲಿ ಪ್ರೇಮಿತಳಾಗಿ ಮುಂದೆ ಏನೇನೋ ಆಗಿ ಇಡೀ ಸಮಸ್ಯೆಯೇ ಬಗೆಹರಿದು ಹೋಗುತ್ತಿತ್ತಲ್ಲಾ
ಎಂದು ಚೆರ್ಚಿಸಿ ವಾದಿಸಿ ವಾಗ್ವಾದ ಮಾಡಿ ಬೈಟು ಟೀಗಳನ್ನು ಹೀರಿ ಮೇಲೆದ್ದಿದ್ದರು. ಒಟ್ಟಾಗಿ
ಒಂದಾಗಿ ಒಂದೇ ವಟಾರದಲ್ಲಿ ಒಂದೇ ಜಾತಿಯಲ್ಲಿ ಹುಟ್ಟಿ ಬೆಳೆದ ನಮ್ಮಲ್ಲಿ ಆಕೆ ಯಾರಿಗಾದರೂ ಹೃದಯ
ಕೊಟ್ಟರೂ ಸಾಕು; ನಮ್ಮಲ್ಲಿ ಯಾರನ್ನಾದರೂ ಆಕೆ ಮೆಚ್ಚಲಿ ಒಟ್ಟಿನಲ್ಲಿ ಆ ಸುಂದರಿ ನಮ್ಮ ಪಾಲಿಗೆ
ದಕ್ಕಲಿ ಎಂದೂ ಇದು ಸಂಘದ ಒಗ್ಗಟ್ಟಿನ ಸಂಕೇತವೆಂದು ಅದರ ಮುಂದಾಳು ವಾದಿಸಿದ್ದ.
ವಿಚಿತ್ರ ಎಂದರೆ ಇವರಾರಿಗೂ ನಮ್ಮ ಪೂರ್ವಿಕರ ತೋಪಿನ ಬಗೆಗಾಗಲೀ ಸಾಲು ಮರಗಳು ಅಹೋ ರಾತ್ರಿ
ಕಣ್ಮರೆಯಾಗುತ್ತಾ ಅಲ್ಲಲ್ಲಿ ಬೆಳೆದಿದ್ದ ಗಂಧದ ಮರಗಳು ಗುರುತಿಗೂ ಸಿಗದಂತೆ ಮಾಯವಾಗಿದ್ದರ ಬಗ್ಗೆ
ಎಳ್ಳಷ್ಟೂ ನೋವಾಗಿರಲಿಲ್ಲ. ಅವರಿಗೆ ಅವರದೇ ಹೊಸ ಲೋಕದ ಕನಸುಗಳಿದ್ದವು. ಹೇಗಾದರೂ ಮಾಡಿ ಮಜವಾಗಿ
ಸುಖವಾಗಿ ಎಲ್ಲವನ್ನೂ ಪಡೆಯಬೇಕು ಎಮ್ಬ ತರಾತುರಿಯಲ್ಲಿದ್ದರು.
ಹೀಗಿರುವಾಗಲೇ ಅವರು ಫಜೀತಿಗೆ ಸಿಕ್ಕಿಕೊಂಡು ನನ್ನನ್ನೂ ಒಳಪಡಿಸಿ ಕನಸುಗಳನ್ನು ಬೆಂಕಿಕೊಂಡಕ್ಕೆ
ಸುರಿಯುವಂತೆ ಮಾಡಿದ್ದರು. ಶಾಲೆಗೆ ಹೋಗುವ ಪುಟ್ಟ ಹುಡುಗನನ್ನು ಹಿಡಿದು ಅವನಿಗೆ ಸಕ್ಕರೆ ಮಿಠಾಯಿ
ಕೊಡಿಸಿ ಆ ಅಪಾರ ಪ್ರೇಮದ ಪತ್ರಗಳ ದೈವೀಕಟ್ಟನ್ನು ಕೈಗಿತ್ತು ಅದನ್ನು ತಪ್ಪದೆ ಊರ್ವಶಿಗೆ ಕೊಟ್ಟು
ಬರಬೇಕೆಂದು ಹೇಳಿದ್ದರು. ಆ ಹುಡುಗನಿಗೆ ಇದೊಂದು ಸಾಮಾನ್ಯ ಕೆಲಸವಾಗಿರಲಿಲ್ಲ. ಮಿಠಾಯನ್ನು
ಕಳೆದುಕೊಳ್ಳಲೂ ಮನಸ್ಸಿರಲಿಲ್ಲ. ಆಯ್ತು ಎಂದು ಬಂದು ಶಾಲೆಯ ಆವರಣದಲ್ಲಿ ಆ ಕಟ್ಟನ್ನು
ಹಿಡಿದುಕೊಂಡು ಎಲ್ಲೊ ಬಿಸಾಕಲು ಹೆದರಿಕೆ ಆಗಿ ಊರ್ವಶಿಗೆ ತಲುಪಿಸುವುದು ಇನ್ನೂ ಭಯಂಕರ ಭೂತವಾಗಿ
ಕಂಡು ಅವರಿಗೆ ಹೊಳೆದಿದ್ದಂತದೇ ಇನ್ನೊಂದು ಐಡಿಯಾ ಇವನಿಗೂ ಹೊಳೆದುಬಿಟ್ಟಿತು.
ನೇರ ಹೋದವನೆ ಆ ಕಟ್ಟನ್ನು ಅಂಚೆ ಡಬ್ಬಿಗೆ ಎಸೆದುಬಿಟ್ಟ. ಅಂಚೆ ಪೆಟ್ಟಿಗೆಗೆ ಹಾಕಿದರೆ ಯಾವ
ತೊಂದರೆಯೂ ಇಲ್ಲದಂತೆ ಅಂಚೆ ಪೇದೆಯ ಮೂಲಕ ಊರ್ವಶಿಯ ಕೈ ತಲುಪುತ್ತದೆಂದು ಆ ಹುಡುಗ ತರ್ಕಿಸಿದ್ದ.
ಮರುದಿನ ಆ ಪತ್ರಗಳ ಕಟ್ಟನ್ನು ಕಂಡು ಓದಿ ಅಂಚೆ ಪೇದೆ ಆ ಪ್ರೇಮ ಭಿಕ್ಷೆಯ ಲಿಖಿತಕ್ಕೆ ಬೆವರಿ ನೇರ
ಹೋಗಿ ತಾಯವ್ವನ ಮುಂದಿಟ್ಟು ನೋಡಿ ಎಂತಹ ಕೇಸನ್ನು ಹಿಡಿದು ಹಾಕಿ ನಿಮಗೆ ಉಪಕಾರ ಮಾಡಿದ್ದೇನೆ ಎಂದು
ಹೆಮ್ಮೆಯಿಂದ ಅವಳ ಶೋಗಾಗಿ ಕಾತರಿಸಿದ. ಆಕೆ ಅವನ ಉಪಕಾರ ಸ್ಮರಣೆಗಿರಲೆಂಬಂತೆ ಕುಳಿತಲ್ಲಿಂದ ಬಗ್ಗಿ
ಮೇಲೇಳುವಂತೆ ತನ್ನ ಹಿಂಬದಿಗಳ ದರ್ಶನ ತಕೋ ಎಂದು ಭಾರವನ್ನೆಲ್ಲ ಬಿಟ್ಟು ಎದ್ದಳು. ಮುಂಭಾರವಾಗಿ ಆ
ಧಡೂತಿ ಜಘನಗಳ ಸಂದಿಯಿಂದ ಬಹಳ ಹೊತ್ತಿನಿಂದ ತುಳಿತಕ್ಕೆ ಒಳಗಾಗಿ ಗೊಡಗೊಡ ಬುಡುಗುಡುತ್ತಿದ್ದ ಊಸು
ಡುರ್ ಎಂದು ಸಲೀಸಾಗಿ ಹೊರಕ್ಕೆ ಬಂದು ನೋಡಿದೆಯಾ; ನನ್ನನ್ನು ಎಲ್ಲಿಯ ತನಕ ನೀನು ತಡೆಹಿಡಿಯಲು
ಸಾಧ್ಯ ಎಂಬಂತೆ ವಾಸನೆಯಿಂದ ಅಲ್ಲೆಲ್ಲ ವ್ಯಾಪಿಸಿಕೊಂಡಿತು. ಅಂಚೆ ಪೇದೆಗೆ ನಿರಾಶೆಯಾಗಿ, ತತ್
ಎಂದು ಹೊರಕ್ಕ ಬಂದು ಕುಳಿತು ತಾನೂ ಒಂದು ಪ್ರೇಮ ಪತ್ರವನ್ನು ಬರೆದು ಊರ್ವಶಿಯ ಕೈಗೆ ಕೊಟ್ಟು ಯಾಕೆ
ತನ್ನ ಅದೃಷ್ಟ ಪರೀಕ್ಷೆ ಮಾಡಬಾರದೆಂದು ಚಿಂತಿಸತೊಡಗಿದ. ತಾಯವ್ವ ರೇಡಿಯೋದ ಗದ್ದಲದಲ್ಲಿ ತನ್ನ ಊಸು
ಯಾರ ಗಮನಕ್ಕೂ ಬರಲಿಲ್ಲವೆಂದು ಒಳಕ್ಕೆ ಹೋಗಿ ಮಗಳ ಕಡೆ ಕೆಕ್ಕರಿಸಿ ನೋಡಿ ಆ ಪತ್ರಗಳನ್ನು ಅವಳ
ಮುಂದೆ ಎಸೆದು ಬಂದಳು.
ಈ ವಿಷಯ ಊರಲ್ಲೆಲ್ಲ ಹಬ್ಬದಿರಲೆಂದು ಅಂಚೆಯವನಿಗೆ ಸಿಂಗಲ್ ತಟ್ಟೆ ಇಡ್ಲಿಯನ್ನು ಕೊಟ್ಟು
ಊಸುವಾಸನೆಯಿಂದ ಉಪಚರಿಸಿದಳು. ಮಗಳ ತಪ್ಪೇನೂ ಇಲ್ಲ ಎಂದು ಆ ಸಂಘದ ಹುಡುಗರ ಮೇಲೆ ಕೆಂಡವಾಗಿ ಆ
ತರಲೆಗಳಿಗೆ ಇನ್ನು ಮುಂದೆ ತನ್ನ ಹೋಟೆಲಿಂದ ಏನೂ ದೊರೆಯದೆಂದೂ ಅವರು ತಮ್ಮಲ್ಲಿಗೆ ಬರಬಾರದೆಂದು
ಅವರಿವರ ಬಳಿ ಸಿಟ್ಟು ಕಾರಿಕೊಂಡು ಅವರು ಬಂದರೂ ತಿಂಡಿಕೊಡದೆ ಅವಮಾನಿಸಿದಳು. ಇದೆಲ್ಲ ಆದ ಮೇಲೆಯೇ
ತಾಯವ್ವನ ಹೋಟೆಲಿಗೆ ಪ್ರವೇಶ ಕಾರ್ಯಾಚರಣೆಯನ್ನು ಸಂಘದವರು ಏರ್ಪಡಿಸಿದ್ದು.
ನನ್ನ ದುರಾದೃಷ್ಟಕ್ಕೆ ಇದೇ ವೇಳೆಗೆ ನನು ಊರಿಗೆ ಹೋಗಬೇಕಾಗಿದ್ದ ಅನಿಷ್ಟ ಅನಿವಾಯ ಸಂದರ್ಭವೊಂದು
ಒದಗಿ ಬಂದಿದ್ದು ಊರಲ್ಲೇ ಒಂದು ದಿನದ ಮಟ್ಟಿಗೆ ಉಳಿದುಕೊಂಡಿದ್ದೆ. ಆ ಯುವಕರ ಗುಣಾವಗುಣಗಳೆಲ್ಲ
ಚೆನ್ನಾಗಿ ಗೊತ್ತಿದ್ದರೂ ಅವರ ಮಾತಿಗೆ ಕಟ್ತುಬಿದ್ದು ಸಿಕ್ಕಿಕೊಂಡಿದ್ದೆ. ಇವರು ಬೇಕಂತಲೇ ತಮ್ಮ
ಯಾವುದೋ ಒಂದು ಕ್ಷುಲ್ಲಕ ವೈಯಕ್ತಿಕವಾದ ಸಮಸ್ಯೆಗೆ ಈಡಾಗಿ ಏಟು ತಿಂದು ತದನಂತರ ಆ ವಿಚಾರಕ್ಕೆ
ವಿಸ್ತಾರವಾದ ಸಾಮಾಜಿಕ ಆಯಾಮವನ್ನು ಹೆಣೆದು ಹೋರಾಟಕ್ಕಿಳಿಯುತ್ತಾರೆಂದೂ ಕೊನೆಗದಕ್ಕೆ ಅನಿವಾಯವಾದ
ಜಾತಿ ಸಂಬಂಧ ಬಂದೊದಗಿ ಎಲ್ಲವೂ ಗೊಂದಲವಾಗಿ ಅನಾಹುತಗಳ ಸರಮಾಲೆ ಆರಂಭವಾಗುತ್ತದೆಂದು ತಿಳಿದಿದ್ದೆ.
ಹೀಗೆ ತಿಳಿದೂ ತಿಳಿದೂ ಮೂರ್ಖನಾಗಿ ಮತ್ತೆ ಮತ್ತೆ ಅದರಲ್ಲಿ ಸಿಲುಕುವ ದೌರ್ಬಲ್ಯದಿಂದ ನಾನು
ಬಿಡಿಸಿಕೊಳ್ಳಲು ಆಗಿರಲೇ ಇಲ್ಲ. ಹೋಟೇಲ್ ಪ್ರವೇಶ ಕಾರ್ಯದ ಮುಂದಾಳತ್ವವನ್ನು ನಾನು ವಹಿಸಿಕೊಂಡು
ಕೊನೆಗೊಂದು ಪುಟ್ಟ ಭಾಷಣವನ್ನು ಅಲ್ಲಿ ಬಿಗಿಯಬೇಕೆಂದು ಒಪ್ಪಿಸಿಬಿಟ್ಟಿದ್ದರು. ಈ ಮೊದಲು
ಅವರಿಗೊಂದು ಸಂಘದ ಸ್ಥಾಪನೆಗೆ ಮೂಲ ಕಾರಣವಾಗಿದ್ದ ನನ್ನ ತಪ್ಪಿಗಾಗಿ ನಾನೀಗ ಆ ಕಾರ್ಯಕ್ರಮದಲ್ಲಿ
ಪಾಲುಗೊಳ್ಳಲೇಬೇಕಿತ್ತು. ಏನಪ್ಪಾ ಇಂತಹ ಹೋರಾಟಗಳನ್ನು ನೀನು ಸಿಟಿಯಲ್ಲಿ ಎಷ್ಟೊಂದು ಮಾಡಿದ್ದೀಯಾ,
ನೀನೇ ಹಿಂದೇಟು ಹಾಕಿದರೆ ಹೇಗೆ. ಊರಿನಲ್ಲಿ ನಮ್ಮ ಜನಾಂಗಕ್ಕೆ ಏನೋ ಒಂದು ಒಳ್ಳೆಯದು ಮಾಡುವ ಅಂದರೆ
ನಿನ್ನಂತೋರು ಮುಂದೆ ನೀಂತು ಹೀಗೀಗೆ ಮಾಡಿ ಎಂದು ದಾರಿ ತೋರಿಸಿ ಕೊಡಬೇಕಪ್ಪಾ ಎಂದು ಹುಳಿ ಹೆಂಡ
ಕುಡಿಸಿ ಆಯ್ತು ಸೈ ಎನಿಸಿ ಬಿಟ್ಟಿದ್ದರು. ಹೀಗಾಗಿ ನಾಳೆ ಕಾರ್ಯಕ್ರಮ ಇದೆ ಎನ್ನುವ ರಾತ್ರಿಯಲ್ಲಿ
ಬ್ಯಾನಗಳನ್ನು ಬರೆಸಲು ಘೋಷಣೆಗಳನ್ನು ನಾನೇ ಬರೆದು ಕೊಡಬೇಕಾಯ್ತು. ಮೆರವಣಿಗೆಯಲ್ಲಿ ನಮ್ಮ
ಶಕ್ತಿಯ ಸಂಕೇತವಾಗಿ ಇಬ್ಬರು ಹುಲಿವೇಷ ತೊಟ್ಟು ಕುಣಿಯುತ್ತಾ ನಡೆಯಬೇಕೆಂದು ತೀರ್ಮಾನವಾಯ್ತು.
ಆದರೆ ಹುಳಿವೇಷವನ್ನು ಯಾರು ಆಡಬೇಕೆಂಬುದಕ್ಕೆ ಜಿಜ್ಞಾಸೆ ಆರಮ್ಭವಾಗಿ ಹಾಗೆ ಹುಲಿ ವೇಷದಲ್ಲಿ
ತಾನೇನಾದರೂ ಊರ್ವಶಿಯ ಕಣ್ಣಿಗೆ ಯಮ ಭಯಂಕರವಾಗಿ ಗೋಚರಿಸಿ ಆಕೆ ಇನ್ನೆಂದೂ ತನ್ನ ಮುಖವನ್ನೇ
ನೋಡದಂತಾದರೆ ಗತಿಯೇನೆಂದು ನನ್ನಿಂದ ಇದಾಗುವುದಿಲ್ಲ ಎಂದು ಪ್ರತಿಯೊಬ್ಬ ಸದಸ್ಯನೂ ನಿರಾಕರಿಸಿದರು.
ಈ ಚೆರ್ಚೆ ನಡೆಯುತ್ತಿರುವಾಗ ಇದೆಲ್ಲವನ್ನು ಆಲಿಸಿದ ಭಜನೆ ಮನೆ ಕುಂಟಣ್ಣ ಹುಮ್ಮಸ್ಸಿನಿಂದ
ಮೇಲೆದ್ದು ತಾನೇ ಆ ಹುಲಿಯ ವೇಷ ಹಾಕಿ ರೋಷಾವೇಷದಿಂದ ಕುಣಿದು ಆರ್ಭಟಿಸಿ ಥೇಟ್ ಹುಲಿಯಂತೆಯೇ
ಗೂರಾಡಿ ಬಿಡುತ್ತೇನೆಂದು ಮುಂದೆ ಬಂದ. ಹುಲಿಯ ವೇಷಕ್ಕೆ ಒಪ್ಪುವಂತೆನೋ ಅವನ ಮುಖವಿತ್ತು. ಆದರೆ
ಅವನ ಬಲಗಾಲು ಯಾವುದೋ ಹೊಡೆದಾಟದಲ್ಲಿ ಮುರಿದು ಡೊಂಕಾಗಿಬಿಟ್ಟಿತ್ತು. ಹೇ, ಎಂತಹ ಹುಲಿಯೋ ನೀನು.
ಕಾಲೇ ನಿನಗೆ ನೆಟ್ಟಗಿಲ್ಲ. ಕುಂಟಕಂದು ಕುಣಿತಿದ್ರೆ ಆಗ ಎಲ್ರೂ ನಮ್ಮ ಸಾಮರ್ಥ್ಯ ಇಷ್ಟೇ ಎಂದು
ಗೇಲಿ ಮಾಡಿಕೊಂಡು ನಗ್ತಾರಷ್ಟೆ. ನಿನ್ನಿಂದ ಇದು ಸಾಧ್ಯವಿಲ್ಲ ಬೇಡ ಎಂದು ಎಲ್ಲರೂ ರೇಗಿದರು.
ಕೊನಗೆ ನಾನೇ ಒಂದಿಬ್ಬರನ್ನು ಒಪ್ಪಿಸಿದೆ. ಆಗ ಅದಕ್ಕವರು ಒಂದು ಷರತ್ತು ಹಾಕಿದರು. ಹುಲಿವೇಷ
ಎಂದರೆ ಅದೊಂದು ನರಸಿಂಹಾವತಾರ ಇದ್ದಂಗೆ. ಇಡೀ ಊನೇ ಅಲ್ಲಾಡಿಸಿ ನಡುಗಿಸಿ ಘರ್ಜಿಸಿ ಕುಣಿಯಬೇಕು
ಎಂದರೆ ಬಾಳಾ ಕಷ್ಟ ಆಯ್ತದೆ. ಅದ್ಕೆ ನಮಗೆ ಯಕ್ಸ್‍ಟ್ರಾ ಎನರ್ಜಿ ಬೇಕು. ಅದರಿಂದಾಗಿ ನಮಗೆ
ಭರ್ತಿಯಾಗಿ ಸಾರಾಯಿಯನ್ನು ನೀನು ಕುಡಿಸಲೇಬೇಕೆಂದು ಒಪ್ಪಿಸಿಕೊಂಡರು. ನಮ್ಮ ಈ ಕೆಲಸ ಕೇರಿಯವರಿಗೆ
ಹಿಡಿಸದೆ; ನಿಮಗೆ ಬುದ್ಧಿ ಇಲ್ಲವೆಂತಲೂ ಹೀಗೆ ಮಾಡಿ ಊರನ್ನು ಹಾಳು ಮಾಡಲು ತೊಡಗಿದ್ದೀರಿ ಎಂದು
ವಿರೋಧಿಸಿದರು. ಒಳಗೆ ಕುಳಿತು ತಿಂಡಿ ತಿಂದರೇನು ಹೊರಗೆ ನಿಂತು ತಿಂದರೇನು; ಎರಡರಲ್ಲೂ ಅಂತಹ
ವ್ಯತ್ಯಾಸ ಏನೂ ಇಲ್ಲ. ಒಳಗೆ ತಿಂದ್ರೂ ಅದೇನೇ ಹೊರಗೆ ತಿಂದ್ರೂ ಅದೇ. ಇಡ್ಲಿ ಇಡ್ಲಿಯಲ್ದೆ
ಇನ್ನೇನಾಗ್ತದೆ. ಮುಖ್ಯ ವಿಷಯ ಅಂದ್ರೆ ಒಳಗೆ ಕೂತು ತಿಂದವರ ಹೊಟ್ಟೆಯಲ್ಲಿ ಆ ಇಡ್ಲಿ ಏನಾದ್ರೂ
ಚಿನ್ನ ಆಗ್ತದಾ ಅಥವಾ ಹೊರಗೆ ನಿಂತು ತಿಂದವರ ಹೊಟ್ಟೆಯಲ್ಲಿ ಅದೇನಾದ್ರೂ ವಿಷ ಆಗ್ತದಾ? ಏನೂ ಇಲ್ಲ
ಎಲ್ಲಾ ಒಂದೇ ಆಗೋದದೊಂದೇ ಎಲ್ಲ ಹೇಲಾಯ್ತದೆ. ಅಮಾದಿಯಾಯ್ತದೆ. ಅಂತಾದ್ರಲ್ಲಿ ಆ ತಾಯವ್ವನ
ಹೋಟೆಲಿಗೆ ಇವರು ಯಾಕೆ ನುಗ್ಗಬೇಕು ಎಂದು ತಮ್ಮ ವಿಚಾರಗಳನ್ನು ಮಂಡಿಸಿದರು. ನೀನು ತಿಳಿದವನು ಆ
ಹುಡುಗರಿಗೆ ಬುದ್ಧಿ ಹೇಳಬಾರದಿತ್ತೇ ಎಂದು ನನ್ನನ್ನು ಶಪಿಸಿ ಊರ ಉಸಾಬರಿ ನಿನಗೆ ಯಾಕೆ ಬೇಕೆಂದು
ಅಸಮಾಧಾನಗೊಂಡರು. ಹೇಗೋ ಈ ಕಾರ್ಯಕ್ರಮ ಒಂದಾಗಿ ಬಿಡಲಿ ಎಂದು ನಿಶ್ಚಯಿಸಿ ಸರ್ಕಲ್ ಬಳಿ ಬಂದೆ.
ಆಗಲೇ ಸಂಘದವರು ಅಲ್ಲಿ ಜಮಾಯಿಸಿದ್ದರು. ಹುಲಿ ವೇಷದವರು ಬಣ್ಣ ಹೊಡೆದುಕೊಂಡು ವಿಚಿತ್ರ ವೇಷದಲ್ಲೂ
ಸಾರಾಯಿಯ ಅಮಲಿನಲ್ಲೂ ರಂಗಾಗಿ ತೇಲಾಡುತ್ತಿದ್ದರು. ಆಗಲೂ ಆ ಕುಂಟಣ್ಣ ಇವರ ಜೊತೆ ನಾನೂ ಒಂದು
ಹುಲಿಯಾಗಿ ಭಾಗವಹಿಸುವುದಾಗಿಯೂ ತಾನು ಗುಂಡೇಟು ತಿಂದು ಕಾಲು ಮುರಿದುಕೊಂಡು ರಾಂಗಾಗಿರುವ
ಹುಲಿಯೆಂದು ಎಲ್ಲರೂ ಭಾವಿಸಬೇಕೆಂದು ನನ್ನ ಬಳಿ ಬಂದು ವಿನಂತಿಸಿಕೊಂಡ. ಅದಕ್ಕೆಲ್ಲ ಖಂಡಿತ
ಅವಕಶವಿಲ್ಲೆಂದು; ‘ಅಲ್ಲಯ್ಯಾ. ನೀನು ಗುಂಡೇಟು ತಿಂದು ಕುಂಟಾಗಿರುವ ಹುಲಿ ಎಂದು ಅನೌನ್ಸ್ ಮಾಡೋಕೆ
ನಮಗೆ ಪುರುಸೊತ್ತು ಎಲ್ಲಿದೆ, ಹಾಗಂತ ನಿನ್ನ ಬೆನ್ನ ಮೇಲೆ ಹಾಗೆ ಬರೆಯೋಕಾಗಲ್ಲ ನಡಿ ನಡಿ’ ಎಂದು
ಅವನನ್ನು ನಿರಾಶೆಗೊಳಪಡಿಸಿದ್ದರು.
ಬ್ಯಾನರ್ ಹಿಡಿದುಕೊಂಡು ಮುಂದೆ ನಿಂತವರಿಗೆ ಆ ರಾತ್ರಿ ನಾನು ಹೇಳಿದ್ದ ಘೋಷಣೆಗಳನ್ನು
ಜ್~ಝಾಪಿಸಿದೆ. ‘ಜಾತಿ ಬಿಡಿ ಧರ್ಮ ಬಿಡಿ ಮಾನವತೆಗೆ ಜೀವ ಕೊಡಿ’ ಎನ್ನುತ್ತಾ ಕೆಲವರು ಸಂಕೋಚದಿಂದ
ಮೆಲ್ಲಗೆ ಗೋಜಲಾಗಿ ಕೂಗಿದರು. ಮೆರವಣಿಗೆಯಲ್ಲಿ ಹೀಗೆಲ್ಲ ಕೂಗಿಕೊಂಡು ಹೋಗುವ ಬದಲು ನೇರ ತಾಯವ್ವನ
ಹೋಟೆಲಿಗೆ ನುಗ್ಗಿ ‘ತಿಂಡಿ ಟೀ ವಡೆ ಕೊಡ್ರಿ’ ಎಂದು ಕೇಳೋಣ ಎಂದು ಅವರವರೇ ಮಾತನಾಡಿಕೊಂಡರು.
ಚಿಳ್ಳೆ ಪಿಳ್ಳೆ ಹೈಕಳು ನಮ್ಮೊಂದಿಗೆ ಸೇರಿಕೊಂಡು ಇವರೆಲ್ಲ ಯಾವುದೋ ಪರಿಷೆಯೋ ಜಾತ್ರೆಯೋ ಅಥವಾ
ದೇವರು ತರಲು ಸಜ್ಜಾಗಿ ಅಲ್ಲಿಗೆ ಹೋಗುತ್ತಿದ್ದಾರೆಮ್ಬಂತೆ ಅಲ್ಲಿನ ವಾತಾವರಣ ನಿಧಾನಕ್ಕೆ
ರೂಪಾಂತರಗೊಳ್ಳತೊಡಗಿತು. ಹುಲಿವೇಷದವರಿನ್ನೂ ಒಂದೆಜ್ಜೆಯನ್ನೂ ಮುಂದಿಡದೆ ತಮಟೆಯಿಲ್ಲದೆ ನಾವು
ಹುಲಿವೇಷ ಹಾಕಲು ಯಾವ ಕಾರಣಕ್ಕೂ ಸಾಧ್ಯವಿಲ್ಲ ಎಂದು ತಲೆ ಒಗೆದು ಬಿಟ್ಟರು. ತಕ್ಷಣ ಹೇಗೋ ತಮಟೆ
ನಗಾರಿಯವರ ಕೈಕಾಲು ಹಿಡಿದು ಒಪ್ಪಿಸಿ ಮೆರವಣಿಗೆಯನ್ನು ಹೊರಡಿಸಿದೆವು. ತಮಟೆ ನಗಾರಿಗಳು ಮೊಳಗಿದ
ಕೂಡಲೇ ಎರಡೂ ಹುಲಿಗಳು ಪೂತ್ಕರಿಸುತ್ತಾ ಘರ್ಜಿಸಿ ಕುಣಿಯುತ್ತಿದ್ದಂತೆಯೇ ಊರ ಜನ ಮುತ್ತಿಕೊಂಡರು.
ಒಂದಿಬ್ಬರು ಪೂಜಾರಿಗಳೂ ಈಗಲ್ಲಿಗೆ ಬಂದು ಆ ತಮಟೆಗಳ ಗಸ್ತಿಯನ್ನೂ ನಗಾರಿಯವನ ವರಸೆಯನ್ನು ಹಾಗೂ
ಹುಲಿವೇಷದ ವೀರೋತ್ಕರ್ಷವನ್ನೂ ಗಮನಿಸಿ ದೇವರು ಬಂತೆಂಬಂತೆ ಮೈಯನ್ನು ನಡುಗಿಸುತ್ತಾ ಯಾರಾದರೂ
ನಮ್ಮನ್ನು ಈ ಮೆರವಣಿಗೆಗೆ ಕರೆಯಬಹುದೆಂದು ನೋಡುತ್ತಿದ್ದರು. ದೇವರು ದಿಂಡರ ಬಗ್ಗೆ ಅಪಾರ
ಉಪೇಕ್ಷೆಯುಳ್ಳ ಸಂಘದವರ ಮುಂದೆ ಪೂಜಾರಿಗಳು ಯಕಶ್ಚಿತ್ ಆಗಿ ಕಂಡು ಇಂತಹ ಮೆರವಣಿಗೆಯಲ್ಲಿ ನಿಮಗೆ
ಸ್ಥಾನವಿಲ್ಲ. ಜಾಗ ಖಾಲಿ ಮಾಡಿ ಎಂಬಂತಾಗಿತ್ತು. ಹುಲಿಗಳೆರಡನ್ನೂ ಸೊಂಟಕ್ಕೆ ಬಲವಾಗಿ ಹಗ್ಗಬಿಗಿದು
ಜನ ಹಿಡಿದುಕೊಂಡಿದ್ದರೂ ಸೊಂಟದ ಹಗ್ಗದಿಂದಲೇ ಅವರನ್ನು ಎಳೆದುಹಾಕುತ್ತಾ ಮಲ್ಲಯುದ್ಧ ಪಟುಗಳಂತೆ ಆಟ
ತೋರಿಸುತ್ತಾ ಲಾಗಾ ಪಲ್ಟಿಗಳನ್ನು ದೊಂಬರಂತೆ ಹಾಕುತ್ತಾ ತಮಟೆ ಏಟುಗಳು ಇನ್ನೂ ಬಲವಾಗಿ
ಬೀಳಬೇಕೆಂದು ಕಣ್ಣಲ್ಲೇ ಸೂಚನೆ ಕೊಡುತ್ತಾ ತರಾವರಿ ಭಂಗಿಗಳಲ್ಲಿ ಹೆಂಗಸರ ಕಡೆ ನೋಡುತ್ತಾ ಇಡೀ
ಊರನ್ನೇ ಕೂಗಿಕೊಳ್ಳುವಂತೆ ವರ್ತಿಸತೊಡಗಿದರು.
ಸಂಘದ ಸದಸ್ಯರು ಘೋಷಣೆ ಕೂಗಬೇಕಾದ ಅಗತ್ಯವೇ ಈಗಿರಲಿಲ್ಲ. ಬೀದಿಗಳಲ್ಲಿ ಹಬ್ಬಗಳಲ್ಲಿ ಕುಣಿಯುವ
ಹಳಬರು ಇದೂ ಒಂದು ಭಕ್ತಿ ಎಂಬಂತೆ ಅವರೊಟ್ಟಿಗೆ ಸೇರಿಕೊಂಡು ಕುಣಿಯತೊಡಗಿದರು. ಕುತೂಹಲದ ನೂರಾರು
ಜನ ಅವರನ್ನು ಹಿಂಬಾಲಿಸಿದರು. ಮೆರವಣಿಗೆ ಊರುಮಧ್ಯಕ್ಕೆ ಬಂದಿತ್ತು. ವಿಪರೀತ ನಿರಾಶೆಯಿಂದಲೋ ಏನೋ
ಒಂದು ಹುಲಿ ಸರಾಯಿಯ ಅಮಲು ಹೊಡೆತಗಳ ತಾಳಲಾರದೆ ಉರುಳಾಡಿ ಬಿದ್ದುಕೊಂಡು ಗಟಾರೆಂದು ವಾಂತಿಮಾಡಿ
ಮೇಲೆದ್ದು ಕೆಂಗಣ್ಣಿಂದ ಎದುರಿನ ಹುಲಿ ಮೇಲೆ ಬಿದ್ದು ದಾಸಯ್ಯಗಳು ಬೋಪರಾಕೂ ಹಾಕುವಂತೆ ಒಂದು
ಮೂಲೆಯಿಂದ ಇನ್ನೊಂದು ಮೂಲೆವರೆಗೆ ಹಾರಿ ಕುಣಿಯತೊಡಗಿದ. ಇನ್ನೊಂದು ಹುಲಿ ಈತ ತನಗೆ ಸರಿಸಾಟಿ
ಅಲ್ಲವೆಂದು ಜರಿಯುತ್ತಾ ತಾನೀಗ ನಾಗ ನೃತ್ಯವನ್ನು ಆಡಿ ತೋರಿಸುವೆನೆಂದು ಅಂತಹ ಹೆಜ್ಜೆಗಳಿಗೆ
ಸೆಟ್ಟಾಗುವಂತೆ ತಮಟೆ ನಗಾರಿಗಳು ಬರಲೆಂದು ಆದೇಶಿಸುತ್ತಿದ್ದ. ತಮಟೆಯವರು ರೇಗುತ್ತ ಹೇಗೋ ಸಾಗಿ
ಬಂದರು.
*
*
*
ಇದೆಲ್ಲ ಹೀಗೆ ನಡೆಯುತ್ತಿರುವಂತೆ ಅಲ್ಲಿ ಹೊರಗೆ ಮತ್ತೊಂದು ನಡೆಯುತ್ತಿತ್ತು. ಪರಿಸ್ಥಿತಿ ಕೈ
ಮೀರುತ್ತಿರುವಂತೆ ಎಲ್ಲವೂ ವಿಸ್ತರಿಸಿಕೊಳ್ಳುತ್ತಿತ್ತು. ಸಂಘದವರ ಪ್ರೇಮ ಪತ್ರಗಳ ಕಟ್ಟು ಊರ
ದೊರೆಯಂತಿದ್ದ ಸುಬ್ಬೇಗೌಡರ ಪಾದ ತಳದಲ್ಲಿ ಬಿದ್ದು ಅವರ ಮರ್ಮಾಂಗಕ್ಕೆ ಚುಚ್ಚಿದಂತಾಗಿತ್ತು.
ಸುಬ್ಬೇಗೌಡರು ಇಡೀ ಸುಳ್ಳೇಳು ಹಳ್ಳಿಗಳಿಗೂ ದೊಡ್ಡಕುಳ. ಅವರ ಜಮಾನಗಳ ಕಾಲದಲ್ಲಿ ತಾಯವ್ವನ ರತಿ
ಪಲ್ಲಂಗದಲ್ಲಿ ವಿಹರಿಸಿ ಊರ್ವಶಿಯ ಜನ್ಮಕ್ಕೆ ಕಾರಣವಾಗಿದ್ದರು. ಯಾವುದೋ ಊರಿಂದ ಬಂದ
ಸುಬ್ಬಾಚಾರ್ಯರಿಗೆ ಊರಲ್ಲಿ ತಳವೂರಲು ಗೌಡರೇ ಅನುವುಮಾಡಿಕೊಟ್ಟಿದ್ದರು. ಆ ಮೇಲೆ ಹೊಟೇಲು
ಇಟ್ಟುಕೊಂಡು ಸುಖವಾಗಿರುವ ಕಾಲಕ್ಕೆ ಸುಬ್ಬಾಚಾರ್ಯರಿಗೆ ಸಂಸಾರದಲ್ಲಿ ವೈರಾಗ್ಯ ಮೂಡಿ ಗೌಡರ ಜೊತೆ
ಜಗಳ ಅಡಿಕೊಂಡು ಕಾಶಿಗೊ ರಾಮೇಶ್ವರಕ್ಕೋ ಹೊರಟುಹೋದವರು ಮತ್ತೆಂದೂ ಹಿಂದಿರುಗಿರಲಿಲ್ಲ. ಊರ್ವಶಿ
ನಿಜವಾಗಿಯೂ ತರುಣರ ನಿದ್ದೆಯನ್ನು ತುಂಡು ಮಾಡಿದ್ದಳು. ಸುಬ್ಬೇಗೌಡರು ಕಾಲಾಂತರದಲ್ಲಿ ರಾಜಕೀಯಕ್ಕೆ
ಪ್ರವೇಶಿಸಿ ದೊಡ್ಡ ಹೆಸರಾಗಿದ್ದರು. ಊರಲ್ಲಿ ಆಗುತ್ತಿದ್ದ ತರಾವರಿ ವೈಪರೀತ್ಯಗಳಿಂದ ಗಾಭರಿಯಾಗಿಯೇ
ಹಿಂದೆ ನಾನು ಯಾವುದಕ್ಕೂ ಮುಂದೆ ಬೇಕಾಗಬಹುದೆಂದು ದೀನ ಸೇವಾ ಸಂಘ ಕಟ್ಟಲು ಯುವಕರನ್ನು
ಪ್ರೇರೇಪಿಸಿದ್ದು. ಈಗ ಆ ಹುಡುಗರು ಗೌಡರ ವಿರುದ್ಧ ತಿರುಗಿ ಬಿದ್ದು ಮುಂದಿನ ಚುನಾವಣೆಯಲ್ಲಿ
ಹೇಗಾದರೂ ಮಾಡಿ ಗೌಡರ ಕಡೆಯವರನ್ನು ಸೋಲಿಸಬೇಕೆಂದು ಪಣವೊಡ್ಡಿದ್ದರು. ಗೌಡರಿಗೆ ಈ ತರಲೆ
ಹುಡುಗರನ್ನು ಊರಲ್ಲಿ ಹೀಗೇ ಬಿಟ್ಟರೆ ನಾಳೆ ನಮ್ಮ ತಲೆಗೆ ಸಮ್ಚಕಾರ ಬರಬಹುದೆಂದು ಅವರನ್ನು
ಮಟ್ಟಹಾಕಲು ಸಮಯಕ್ಕಾಗಿ ಕಾಯುತ್ತಿದ್ದರು. ಮೆರವಣಿಗೆ ಊರ ಕೂಡುದಾರಿ ದಾಟಿ ತಾಯವ್ವನ ಹೊಟೇಲನ್ನು
ಸಮೀಪಿಸುತ್ತಿತ್ತು. ತಾಯವ್ವ ಒಳಗೊಳಗೇ ಅಳುಕುತ್ತ ಏನಾದರಾಗಲಿ ಗೌಡರು ನಮ್ಮ ಪಾಲಿಗೆ ಇದ್ದಾರೆಂದು
ಗಿರಾಕಿಗಳಿಗೆ ಶೋ ಜೊತೆ ತಿಂಡಿ ಕೊಡುತ್ತಾ ಮಸಾಲೆ ಚಟ್ನಿಯನ್ನು ವಿಶೇಷವಾಗಿ ಹಾಕಿಕೊಡುತ್ತಾ
ಏನಾದರೂ ಗಲಾಟೆ ಆದರೆ ನೀವು ಸ್ವಲ್ಪ ನೋಡಿಕೊಳ್ಳಿ ಎಂಬಂತೆ ಅವರಿವರಿಗೆ ಹೇಳುತ್ತಾ
ಬೆವರುತ್ತಿದ್ದಳು. ಊರ್ವಶಿ ಎಂದಿನಂತೆ ಇದಾವ ಗೋಜಲೂ ಬೇಡವೆಂಬಂತೆ ರೇಡಿಯೋ ಗಾನದಲ್ಲಿ
ಮುಳುಗಿದ್ದಳು.
ಊರ ಗೌಡರು ತಾಲೂಕು ಬೋರ್ಡ್ ಮೀಟಿಂಗ್‍ನಲ್ಲಿ ಕುಳಿತು ಊರ ಗೋಮಾಳಗಳ ನಕ್ಷೆಗಳ ಜಪ್ತಿ
ಮಾಡುತ್ತಿದ್ದು ಯಾವ್ಯಾವ ಊರುಗಳ ಗೋಮಾಳಗಳನ್ನು ಯಾಯಾರು ಕಬಳಿಸಿದ್ದಾರೆಂಬ ಲೆಕ್ಕ ತೆಗೆಯುತ್ತಾ
ಯಾವ ಜಾಗದಲ್ಲಿ ಏನೇನು ಸಾಧ್ಯವಿದೆ ಎಂದು ಬರೆದುಕೊಂಡು ಅಧಿಕಾರಿಗಳ ಜೊತೆಯು ಬೋರ್ಡಿನ ಸದಸ್ಯರ
ಜೊತೆಯೂ ಚರ್ಚೆ ಮಾಡುತ್ತಾ ತನ್ನ ಊರಿಗೆ ಇಂತಿಂತಹ ಕಲ್ಯಾಣ ಕಾರ್ಯಗಳು ಜರೂರಾಗಿ ಆಗಬೇಕೆಂದು ಪಟ್ಟು
ಹಿಡಿದು ಮಂಜೂರು ಮಾಡಿಸಿಕೊಳ್ಳುತ್ತಿದ್ದರು. ಸರ್ಕಾರಿ ಆಸ್ತಿಪಾಸ್ತಿಗಳನ್ನು ವಶಪಡಿಸಿಕೊಂಡು
ಹಳ್ಳಿಯ ಉದ್ಧಾರಕ್ಕೆ ಅವನ್ನು ರೂಪಿಸಿಕೊಳ್ಳಲು ಸುಬ್ಬೇಗೌಡರು ದೊಡ್ಡ ಯೋಜನೆಗಳನ್ನೇ ಸಲ್ಲಿಸಿ
ಯಶಸ್ವಿಯಾಗಿದ್ದರು. ಇಂತಹ ಜುಜುಬಿ ಕೆಲಸಗಳೆಲ್ಲ ಅವರಿಗೆ ನೀರು ಕುಡಿದಷ್ಟು ಸಲೀಸಾಗಿದ್ದವು. ಅವರ
ರಾಜಕೀಯ ತೇಜಸ್ಸು ದೆಹಲಿಯ ರಾಜಭವನದ ಕಂಬಗಳ ತನಕ ಹೋಗಿದ್ದು, ಅವರು ಯಾವುದರ ಬಗೆಗಾದರೂ ಏನಾದರೂ
ಹೇಳಿ ತೀರ್ಮಾನಿಸಿದರೆಂದರೆ ಅದು ಅಲ್ಲಿಗೆ ಮುಗಿದಂತೇ ಅಂದು ಅರ್ಥ. ಅಂತಹ ಸುಬ್ಬೇಗೌಡರ ಶಕ್ತಿಯ
ಮುಂದೆ ಅನೇಕ ಹಿರಿಯ ರಾಜಕಾರಣಿಗಳೇ ಭಯ ಪಡುತ್ತಿದ್ದರು. ತಾಯವ್ವನ ಹೊಟೇಲಿನ ಮುಂದೆ ಅಪಹಾಸ್ಯಕ್ಕೆ
ಒಳಗಾಗುವುದಕ್ಕೆ ಮೊದಲೇ ಏನಾದರೊಂದನ್ನು ಈಗ ಮಾಡಲೇಬೇಕೆಂದು ಸಂಘದವರನ್ನೆಲ್ಲ ಕರೆದ. ಕೆಲವೇ ಮಂದಿ
ಉಳಿದಿದ್ದರು. ತಾಯವ್ವನ ಕಡೆಯ ಕೆಲವರು ಅದೇಗೆ ಒಳಗೆ ಕಾಲಿಡುವಿರೋ ನೋಡುತ್ತೇವೆಂದು ಮೀಸೆ ಮೇಲೆ
ಕೈಯಾಡಿಸುತ್ತಿದ್ದರು. ಹುಲಿಯಂತೆ ಬಂದು ಈಗ ಇಲಿಯಾಗಿ ಹೆದರಿಕೊಂಡು ಆಚೆಯೇ ನಿಂತಿವೆ ನನ್‍ಮಕ್ಕಳು.
ಬಹಳ ದೊಡ್ಡ ಮನುಷ್ಯನಂಗೆ ಆ ಹೈಕಳಾ ಕಟ್ಟಿಕೊಂಡು ಬಂದುಬಿಟ್ಟ ಸೂಳೇಮಗ ಎಂದು ಯಾರೋ ನನ್ನ ಕಡೆ
ಉಗಿದರು. ಉನ್ಮಾದಕ್ಕೆ ಒಳಗಾಗುವುದರಲ್ಲಿ ಯಾವತ್ತೂ ಮುಂದಿದ್ದ ನಾನು ತಲೆ ಕೆಟ್ಟು ಬನ್ರೋ
ಆದದ್ದಾಗಲಿ ಒಳಗೆ ನುಗ್ಗೋಣ ಎಂದು ನುಗ್ಗಿ ಎಲ್ರಿಗೂ ಇಡ್ಲಿ ವಡೆ ತಿಂಡಿ ಕೊಡ್ರಿ ಎಂದು ನಾನು
ಮೈಮರೆತು ಕೂಗಿಕೊಂಡೆ. ನಾವು ಹದಿನೈದಿಪ್ಪತ್ತು ಮಂದಿ ಇದ್ದೆವು. ನುಗ್ಗಿದ ಕೂಡಲೆ ಕೈಕೈ
ಮಿಲಾಯಿಸುವಂತೆ ಜಗಳ ಆದರೂ ನಾವು ರೋಸಿ ಹೋಗಿ ಕೈಬಿಡಲಿಲ್ಲ. ತಾಯವ್ವ ಎಲ್ಲಿಂದಲೋ ಬಂದು
ಸೇರಿಕೊಂಡಿದ್ದ ಬ್ರಾಹ್ಮಣರ ಹೆಣ್ಣುಮಗಳಾದ್ದರಿಂದ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಲು
ಅಲ್ಲಿನ ಅನೇಕ ಶೂದ್ರ ಗಿರಾಕಿಗಳು ತಯಾರಿರಲಿಲ್ಲ. ತಾಯವ್ವ ಹಿಡಿ ಶಾಪ ಹಾಕಿ ತಿಂಡಿಕೊಡಲು ಈ
ಜನ್ಮದಲ್ಲಿ ಸಾಧ್ಯವಿಲ್ಲ ಹೊರಕ್ಕೆ ನಡೆಯಿರಿ ಎಂದು ರಂಪ ಮಾಡುತ್ತಿದ್ದಳು. ಹೊರಗೆ ಕುಳಿತಿದ್ದ
ಎರಡೂ ಹುಲಿಗಳು ಇದೇ ಸರಿಯಾದ ಸಮಯ ಎಂದು ನುಗ್ಗಿ ಬಂದು ಇಡ್ಲಿ ರಾಶಿಯನ್ನು ಗಬಗಬನೆ
ನುಂಗತೊಡಗಿದವು. ಇದೇ ಒಂದು ಸುವರ್ಣಾವಕಾಶ ಎಂದು ಕೇರಿಯ ಯಾರು ಯಾರೋ ಒಳಕ್ಕೆ ಹೋಗಿ ಕೈಗೆ
ಸಿಕ್ಕಿದ್ದನ್ನೆಲ್ಲ ದೋಚಿಕೊಂಡು ಕಣ್ಮರೆಯಾದರು. ಊರ್ವಶಿ ಬೆದರಿದ ಹರಿಣಿಯಂತೆ ತಾಯಿಯ ಜೊತೆ ಕಿರು
ಮನೆಯೊಳಗೆ ಅವಿತುಕೊಂಡಳು. ತಾಯವ್ವನ ರಕ್ಷಣೆಗೆಂದು ನಿಂತಿದ್ದವರು ಗಲ್ಲಾಪೆಟ್ಟಿಯ ಸಮೇತ
ಮಾಯವಾದರು. ಇಡ್ಲಿ ತಿಂದು ಮುಗಿಸಿದ ಒಂದು ಹುಲಿ ಈಗ ಬಾಳೆಹಣ್ಣಿನ ಗೊನೆಯನ್ನು ಮೇಯುತ್ತಿದ್ದರೆ
ಮತ್ತೊಂದು ಹುಲಿ ನೆನ್ನೆ ಮೊನ್ನೆ ಮಾಡಿದ್ದು ಬಿಕರಿ ಆಗದೆ ಉಳಿದಿದ್ದ ತಂಗಳು ಬೋಂಡಾವನ್ನು
ನೊಣೆಯುತ್ತಿತ್ತು.
ಅಷ್ಟರಲ್ಲಿ ಸುದ್ದಿ ತಿಳಿದು ಸುಬ್ಬೇಗೌಡರ ಕಡೆಯ ನಾಲ್ಕಾರು ಯುವಕರು ಆಯುಧ ಸಹಿತ ಬಂದು ಜಟಾಪಟಿಗೆ
ಅಂಟಿಕೊಂಡರು. ಯಾವನೋ ಹಿಂದಿನಿಂದು ಬಂದು ಬಲವಾಗಿ ದೊಣ್ಣೆಯಿಂದ ಬಡಿಯುವುದಕ್ಕೂ ತಲೆ
ತಪ್ಪಿಸಿಕೊಂಡು ಆ ಏಟು ನನ್ನ ಭುಜಕ್ಕೆ ಬಿದ್ದು ರಂಪವಾಗಿ ನನ್ನ ಮುಖದ ಮೇಲೆ ಚಟ್ನಿ ಬಟ್ಟಲು
ಬಿದ್ದುಈ ಚಟ್ನಿಯ ಕಾರ ಕಣ್ಣಿಗಿಳಿದು ನಾನು ಏನನ್ನೂ ಮಾಡದಾಗಿ ಸಾಕಷ್ಟು ಏಟು ತಿಂದು ಮೇಲೆದ್ದು
ನಿಲ್ಲುವ ಹೊತ್ತಿಗೆ ಉಳಿದ ನನ್ನ ಯುವಕರು ಅಲ್ಲಿಂದ ಓಡಿ ಹೋಗಿದ್ದರು. ಯಾರೋ ಕಿರಿಮನೆಯ ಒಳಗಿಂದ
ಒಬ್ಬ ನುಗ್ಗಿ ಓಡಿದ. ತಾಯವ್ವ ಅಯ್ಯೋ ಅಯ್ಯೋ ಯಾರಾದ್ರೂ ಬನ್ನಿ ಬಿಡಿಸಿ, ಕಾಪಾಡಿ, ಈ ಪಾಪಿಯಿಂದ
ಉಳಿಸಿ ಅಯ್ಯಯ್ಯೋ ಎಂದು ಕೂಗುತ್ತಿರುವುದು ಕೇಳಿಸಿತ್ತು. ತಾಯವ್ವ ಹೊರಕ್ಕೆ ಓಡಿಬಂದವಳೇ ನನ್ನ ಕಡೆ
ಹಿಡಿ ಶಾಪ ಹಾಕುತ್ತಾ ಗಾಭರಿಯಾಗಿ ಏನೇನೋ ಹೇಳುತ್ತಿದ್ದಳು. ಅವಳ ಸೀರೆ ಅಸ್ತವ್ಯಸ್ತವಾಗಿ
ಜಾರಿಹೋಗುತ್ತಿತ್ತು. ತುಟುಗಳಿಂದ ರಕ್ತ ಹರಿಯುತ್ತಿತ್ತು. ಅವಳ ಮುಡಿಯನ್ನು ಯಾರೋ
ಬಿಚ್ಚಿದಂತಿತ್ತು.
ಇದ್ದಕ್ಕಿದ್ದಂತೆ ನನಗೆ ಇಡೀ ಘಟನೆ ದೃಶ್ಯ ನಮ್ಮ ಕಾರ್ಯಾಚರಣೆಯ ಉದ್ದೇಶ ನಮ್ಮ ಗುರಿಗಳೆಲ್ಲ ಬಹಳ
ಅಸಹ್ಯವಾಗಿ ಕಂಡು ನಾನೆಲ್ಲಿದ್ದೇನೆ ಎಂಬುದರ ಅರಿವೇ ಆಗದಂತೆ ನಾನೂ ಕೂಡ ಮನೆ ಕಡೆ ಓಡತೊಡಗಿದೆ.
ಭಜನೆ ಮನೆ ಕುಂಟಣ್ಣ ತಾನೂ ಒಂದು ಕುಂಟು ಹುಲಿ ವೇಷ ಹಾಕಲು ಯೋಜಿಸಿದ್ದವನು ಈಗ ಹೋಟೆಲಿನ ನಡುಮಧ್ಯದ
ದೊಡ್ಡ ಕುರ್ಚಿಯಲ್ಲಿ ರಾಜರ ಭಂಗಿಯಲ್ಲಿ ಕುಳಿತು ಈತನಕ ಈ ಜಾಗಕ್ಕೆ ಬರಲಾಗದೆ ಇಷ್ಟು ಕಾಲದವರೆಗೆ
ತನ್ನನ್ನು ತಡೆದಿತ್ತಲ್ಲಾ ಇವತ್ತು ಹೇಗಿದೆ ಕಾಲ ನೋಡಿದೆಯಾ ಎಂಬಂತೆ ಒಬ್ಬನೇ ಮೌನವಾಗಿ ಕುಳಿತು
ಹೋಟೆಲಿನ ಗೋಡೆಗಳಿಗೆಲ್ಲಾ ಅಂಟಿಸಿದ್ದ ಸಿನಿಮಾ ನಟಿಯರ ಕಡೆಗೆ ಮಾರ್ಮಿಕವಾಗಿ ನೋಡುತ್ತ
ಕುಳಿತಿದ್ದ.
ಸದ್ಯ ಏನೋ ಒಂದು ರಗಳೆ ಮುಗಿಯಿತಲ್ಲಾ ಇನ್ನು ಇದರ ಸಹವಾಸ ಸಾಕು ಎಂದು ಬಂದು ಮಲಗಿ ಮುಂಜಾವಿಗೆ
ಏಳುವ ಹೊತ್ತಿಗೆ ನಾನು ಅನೇಕ ಕತೆಗಳಿಗೆ ಬಲಿಯಾಗಿದ್ದೆ. ಪೇಟೆಗೆ ಹೊರಡಲು ಸಜ್ಜಾಗಿ ಬಾಗಿಲಿಗೆ
ಬರುವ ಹೊತ್ತಿಗೆ ಪೇದೆಗಳು ಬಂದು ನನ್ನನ್ನು ಉಳಿದ ಸದಸ್ಯರ ಜೊತೆ ಸ್ಟೇಷನ್‍ಗೆ ಎಳೆದುಕೊಂಡು
ಹೋದರು. ಪೋಲಿಪುಂಡರನ್ನು ಕಟ್ಟಿಕೊಂಡು ಊರ ನೆಮ್ಮದಿ ಹಾಳುಮಾಡುತ್ತಾ ಅನೇಕ ಜಗಳ ದೊಂಬಿ ಜಾತಿ
ಕಲಹಗಳಿಗೆ ಕಾರಣವಾಗಿ ತಂಡಕಟ್ಟಿಕೊಂಡು ರಾತ್ರಿ ವೇಲೆ ಗೌಡರ ತೋಟಗಳ ಫಸಲನ್ನು ಲೂಟಿ ಮಾಡುವ
ದರೋಡೆಕೋರರಂತೆ ಇವರು ಬೆಳೆದಿದ್ದಾರೆಂದು ಗೌಡರ ಕಡೆಯವರು ಬಲವಾದ ಕೇಸನ್ನು ನಮ್ಮಮೇಲೆ
ಜಡಿದಿದ್ದರು. ಇದು ಸಾಲದೆಂಬಂತೆ ಊರ್ವಶಿಯನ್ನು ಹಿಡಿದು ಅತ್ಯಾಚಾರಕ್ಕೆ ಒಳಪಡಿಸಿ ಮಾನಭಂಗ ಮಾಡಿದ
ಕೀಚಕನೂ ಇವನೆಂದು ಊರ ತುಂಬ ಎಲ್ಲರೂ ಹಂಗಿಸಿ ಈ ವಿಶೇಷ ಕೇಸು ನನ್ನ ಪ್ರಾಣವನ್ನೇ ತೆಗೆಯುವಂತೆ
ಹಿಂಸೆ ಕೊಡತೊಡಗಿತು. ಆ ರಾತ್ರಿ ನಾವೆಲ್ಲ ಸಮನಾಗಿ ಪೊಲೀಸರ ಮೃಷ್ಟಾನ್ನ ಭೋಜನದಿಂದ
ಜರ್ಜರಿತರಾಗಿಬಿಟ್ಟೆವು. ಸುಬ್ಬೇಗೌಡರು ಮೇಲಧಿಕಾರಿಗಳಿಗೆ ಆದೇಶಿಸಿ ನಮ್ಮನ್ನು ಸರಿಯಾಗಿ
ವಿಚಾರಿಸಿಕೊಳ್ಳಲು ಹೇಳಿದ್ದರು.
ಏನೋ ಮಾಡಲು ಹೋಗಿ ಏನೋ ಆಗಿಹೋಗಿತ್ತು. ಸತತವಾಗಿ ಆರು ವರ್ಷಗಳ ತನಕ ಕೋರ್ಟು ಕಚೇರಿ ಹತ್ತಿಳಿದು
ಒಂದೊಂದು ಹಂತದಲ್ಲೂ ತರಾವರಿಯಾಗಿ ನೊಂದು ಬೆಂಡಾಗಿ ನೂರಾರು ಮಂತ್ರಿ ಮಹೋದಯರನ್ನು ಹಿಡಿದು
ಕಾಡಿಬೇಡಿ ತಾವು ದುರ್ಬಲ ದಲಿತರೆಂದೂ ಈ ಗೌಡರು ತಮ್ಮ ರಾಜಕೀಯ ಶಕ್ತಿಯಿಂದ ನಮ್ಮ ಮೇಲೆ ಸೇಡು
ತೀರಿಸಿಕೊಳ್ಳುತ್ತಿದ್ದಾರೆಂದೂ ಶತಶತಮಾನಗಳಿಂದಲೂ ಆಗುತ್ತಿರುವ ಈ ಅನ್ಯಾಯವನ್ನು ತಡೆದು ನಮ್ಮನ್ನು
ಕಾಪಾಡಬೇಕೆಂದು ಅನೇಕ ಬೆಂಬಲ ಮೂಲಗಳನ್ನು ಹಿಡಿದು ಕೊನೆಗೂ ನಾವು ಒಂದು ಶಕ್ತಿಯಾಗಿ ಗೌಡರ ವಿರುದ್ಧ
ಕೇಸಾಕತೊಡಗಿದೆವು. ಕ್ಷುಲ್ಲಕವಾದ ಯಾವುದೋ ಒಂದು ಕಾರಣವೀಗ ಜನಾಂಗೀಯ ಆಯಾಮ ಪಡೆದು ಪರಿಸ್ಥಿತಿ
ಬಿಗಡಾಯಿಸುವಂತೆ ಮಾಡಿ ಗೌಡರು ಊರಲ್ಲಿ ನಮ್ಮ ಕೇರಿಯ ಇತರರ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದರು.
ಇದ್ದಕ್ಕಿದ್ದಂತೆ ನಮ್ಮ ಸಂಘದ ಯಾವನೋ ಒಬ್ಬ ಅವಿವೇಕಿ ಸಂಚು ಮಾಡಿ ನ್ ತನ್ನ ಗುಡಿಸಲು ಮನೆಗೆ ತಾನೇ
ಬೆಂಕಿ ಕೊಟ್ಟುಕೊಂಡು ಆ ರಾತ್ರಿಯೇ ಬಾಯಿ ಬಡಿದುಕೊಂಡು ಅಯ್ಯಯ್ಯೋ ನೋಡ್ರಪ್ಪ ನನ್ ಮನೆಗೆ ಆ ಗೌಡನ್
ಕಡೆಯೋರು ಬೆಂಕಿಹಚ್ಚಿ ಹೋದ್ರಲ್ಲಪ್ಪಾ ಎಂದು ಅಳತೊಡಗಿದ. ಹೀಗೆ ಮಾಡಿ ಸುದ್ದಿಯಾಗಿ ಗೌಡನ ಮೇಲೆ
ಕೆಟ್ಟ ಪರಿಣಾಮವಾಗಲೆಂದು ತಂತ್ರ ಹೂಡಿದ್ದ. ಗೌಡರು ಇದನ್ನರಿತು ಇನ್ನೊಂದು ದಿನ ಕೇರಿಯ ಅನೇಕ
ಗುಡಿಸಲುಗಳಿಗೇ ಬೆಂಕಿಕೊಟು ಆದದ್ದೆಲ್ಲ ಆಗಲಿ ಇವರು ಏನು ಮಾಡುತ್ತಾರೋ ನೋಡೇ ಬಿಡುತ್ತೇನೆಂದು
ಚಾಲೆಂಜ್ ಹಾಕಿ ಅದರಿಂದ ಹತ್ತಾರು ಗಾಯಗಳಿಗೆ ಕಾರಣವಾಗಿದ್ದರು.
ಅದೇ ಕೊನೆ. ಆಮೇಲೆ ನಾನೂ ಊರಿನ ಉಸಾಬರಿಗೆ ಹೋಗಲೇ ಇಲ್ಲ. ಸಂಘದವರೂ ಅಷ್ಟೆ. ಎಲ್ಲ ರಗಳೆಯಿಂದ
ಜರ್ಜರಿತವಾಗಿದ್ದವರು ಬೆಂಗಳೂರಿಗೆ ಬಂದು ಎಂತೆಂತದೋ ಎಲ್ಲೆಲ್ಲಿಯೊ ಒಂದೊಂದು ನೌಕರಿ ಹಿಡಿದು
ಊರನ್ನು ಸಂಪೂರ್ಣವಾಗಿ ಮರೆತು ಬಿಟ್ಟಿದ್ದರು. ಹಾಗೆಲ್ಲ ಆ ಪುಂಡರು ಮಾಡಿದ್ದಕ್ಕೆ ದೇವರೂ ಮತ್ತು
ಗೌಡರೂ ಇಬ್ಬರಿಗೂ ಸರಿಯಾದ ಶಿಕ್ಷೆಕೊಟ್ಟು ಊರಿಂದ ಓಡಿಸಿದರೆಂದು ಸ್ವತಃ ನಮ್ಮ ಜನಗಳೇ
ಮಾತನಾಡಿಕೊಳ್ಳುತ್ತಿದ್ದರು. ಯಥಾಪ್ರಕಾರ ತಾಯವ್ವನ ಇಡ್ಲಿ ಹೋಟೆಲು ಈಗ ಸಾಮ್ಗವಾಗಿ ನಡೆದುಕೊಂಡು
ಹೋಗುತ್ತಿತ್ತು. ಊರ್ವಶಿಯನ್ನು ಗೌಡರು ಮುದ್ದಾಗಿ ನೋಡಿಕೊಂಡು ಯಾರಿಗೂ ಮದುವೆ ಮಾಡಲು ಅಷ್ಟಾಗಿ
ಒಪ್ಪದೆ ರಾಜಕಾರಣದಲ್ಲಿ ಮುಳುಗಿದ್ದರು. ನಮ್ಮವರು ಅವರನ್ನು ಹೊಗಳುತ್ತಾ
ನೆಮ್ಮದಿಯಾಗಿದ್ದುಬಿಟ್ಟಿದ್ದರು. ಸಾಮಾಜಿಕ ಬದಲಾವಣೆಗಳಿಗಿಂತಲೂ ವೇಗವಾಗಿ ಆಧುನಿಕತೆಯ ಮಾಯೆ
ಮತ್ತು ರಾಜಕಾರಣ ಈಗ ಊರಲ್ಲಿ ಸುತ್ತಿಕೊಂಡಿತ್ತು. ಈ ನಡುವೆ ನಮ್ಮ ತಾತನ ಕಾಲದ ಮನೆಯ ಬಳಿ ನಾನು
ಸುಳಿಯುವಂತೆಯೂ ಇರಲಿಲ್ಲ. ಬಹಳ ಲಡಾಸಾದ ‘ಪೂಟ್‍ಲಾಯರಿ’ ಮಾಡಿಕೊಂಡು ಹಾಳಾಗಿ ಹೋದ ಕುಬ್ಜನೆಂದು
ಸ್ವತಃ ನಮ್ಮ ಮನೆಯವರು ನನ್ನನ್ನು ಭೀಕರವಾಗಿ ಕಡೆಗಣಿಸಿದ್ದರು. ಹೀಗಾಗಿ ನನ್ನ ಅಪಾರ ಪ್ರೀತಿಯ ಊರು
ಆ ವನ ಆ ತೋಪು ಆ ಮರಸಿರಿ ಹುಲ್ಲುಹಾಸಿನ ಮೈದಾನ ಕೊಳ ಹಳ್ಳ ಯಾವುದಕ್ಕೂ ಸ್ಪಂದಿಸಲು ಬಿಡದಂತೆ ದೂರ
ಮಾಡಿತ್ತು.
ಇದಿಷ್ಟೆಲ್ಲ ಬಹಳ ಹಿಂದೆ ನಡೆದಿದ್ದರೂ ಈಗ ನಡೆಯಿತೆನ್ನುವಂತೆ ಹೇಳುವಾಗ ನನ್ನೊಳಗೆ ಹತಾಶೆಯ
ಕಂಪನಗಳು ಮೊಳಗುತ್ತವೆ. ಊರನ್ನು ತ್ಯಜಿಸಿದ ಮೇಲೆ ಅಲ್ಲಿನ ವಿಚಾರಗಳನ್ನು ಯಾಯಾರಿಂದಲೋ ಕೇಳಿ
ತಿಳಿದುಕೊಳ್ಳುತ್ತಿದ್ದೆ. ಕನಸಿನಲ್ಲಿ ಮಾತ್ರ ಅಲ್ಲಿಗೆ ಹೋಗಿಬರುತ್ತಿದ್ದೆ. ನನ್ನ ತಾತನ
ಕಾಲವನ್ನು ಈ ಷಹರದ ಮಾಯೆಯಲ್ಲಿ ಒಬ್ಬಂಟಿಯಾಗಿ ನೆನೆನೆನೆಯುತ್ತಮನಸ್ಸಿನಂಗಳದಲ್ಲಿ ಕುಂಟುತ್ತಾ
ಕೇರುತ್ತ ನೆನಪಿನ ರಾಶಿಯಲ್ಲಿ ಮೀಯುತ್ತಾ ನನ್ನ ಆ ಕಾಲದ ಹಾಲು ಹಳ್ಳಿಯನ್ನು ಕಲ್ಪನೆಯ ರತ್ನ
ಸಿಂಹಾಸನದ ಮೇಲೆ ಪವಡಿಸಿ ಕಟ್ಟಿಕೊಳ್ಳುತ್ತಿದ್ದೆ.
ಹೀಗೆಯೇ ಒಂದು ನಡು ಸುಡು ಮಧ್ಯಾಹ್ನದೊತ್ತಲ್ಲಿ ಒಬ್ಬ ಯುವಕ ನನ್ನ ವಿಳಾಸವನ್ನು ಪತ್ತೆ ಮಾಡಿಕೊಂಡು
ಬಂದ. ಯಾರಾದರೂ ಸತ್ತಿರಬಹುದು. ಸಾವಿಗೆ ಕರೆಯಲು ಬಂದಿದ್ದಾನೆಂದು ಏನಪ್ಪಾ ಸಮಾಚಾರ ಎಂದು
ವಿಚಾರಿಸಿದೆ. ನಿಮಗೆ ಈ ಹಿಂದೆಯೇ ಹೇಳಿದ್ದೆನಲ್ಲಾ.... ಆ ವನ ಆ ತೋಪು ಆ ಸುಂದರ ಹೂಬನ. ನಮ್ಮ
ಪೂರ್ವಿಕರು ದಣಿವಾರಿಸಿಕೊಳ್ಳಲು ಮಣ್ಣೊಳಗೆ ಮಲಗಿರುತ್ತಿದ್ದ ತೋಪಿನ ಬಗ್ಗೆ, ಬಂದಿದ್ದವನು ಅದರ
ಬಗ್ಗೆ ನನ್ನೆದುರು ದುಃಖಿಸುತ್ತಾ ಸಾಮ್ಗವಾಗಿ ಹೇಳಿ ಸಹಾಯಕ್ಕಾಗಿ ಬಂದಿದ್ದ.
ಬಂದಿದ್ದವನು ಆ ನಮ್ಮ ತೋಪು ಜೀವ್‍ಗಾಡಿನ ವಿನಾಶದ ಕತೆಯನ್ನು ಬಿಕ್ಕಿ ಬಿಕ್ಕಿ ಹೇಳುತ್ತಿದ್ದ.
ನನಗೆ ನನ್ನ ಆ ಬಾಲ್ಯದ ಮರಗಳು ಕೂಗಿ ಕೂಗಿ ಕರೆದಂತಾಯಿತು. ಊರಿನಲ್ಲಿ ನಮ್ಮ ಸಂಘದ ಫಜೀತಿಯನ್ನು
ಕಣ್ಣಾರೆ ಕಂಡು ಗೌಡರಿಂದ ಅದರ ಪರಿಣಾಮವನ್ನು ಉಂಡಿದ್ದ ನಮ್ಮ ಜನ ಮುಂದೆ ಯಾವ ರೀತಿಯಲ್ಲೂ
ಯಾವುದನ್ನೂ ಪ್ರಶ್ನಿಸದೆ ಮೂಕರನ್ನಾಗಿಸಿತ್ತು. ಸುಬ್ಬೇಗೌಡರು ಸಂಬಂಧಪಟ್ಟ ಎಲ್ಲ ಅಧಿಕಾರಿ
ವರ್ಗದಿಂದಲೂ ಮಂತ್ರಿಗಳಿಂದಲೂ ಸಜ್ಜಾಗಿ ಸಫಲರಾಗಿ ನಮ್ಮ ಕನಸುಗಳನ್ನು ಸಾಕಾರ ಮಾಡಿಕೊಳ್ಳುವ ಮೂಲಕ
ಊರಿಗೆ ಹೊಸ ಸುಧಾರಣೆಯ ನೆಪ ತೋರಿ ಎಲ್ಲರಿಂದಲೂ ಮೆಚ್ಚಿಸಿಕೊಂಡು ಈಗ ತೋಪಿಗೆ ದಾಳಿ ಇಟ್ಟಿದ್ದರು.
ಊರು ವಿಸ್ತಾರವಾಗಿ ಬೆಳೆಯುತ್ತಿತ್ತು. ಅದಕ್ಕೆ ಪೂರಕವಾಗಿ ಈಗ ಅನೇಕ ಸವಲತ್ತುಗಳು ಬೇಕಾಗಿದ್ದವು.
ಊರಿಗೆ ಸ್ವತಃ ಗೌಡರೇ ಖುದ್ದಾಗಿ ನಿಂತು ಒಂದು ಹೈಸ್ಕೂಲನ್ನೂ ಆಸ್ಪತ್ರೆಯನ್ನೂ ಜೊತೆಗೆ ವಿಶಾಲವಾದ
ಬಹೋಪಯೋಗಿ ಸಮುದಾಯ ಭವನದ ನಿರ್ಮಾಣಕ್ಕೂ ಸರ್ಕಾರದಿಂದ ಮಂಜೂರಾತಿ ಮಾಡಿಸಿಕೊಂಡು ಆ ಕಲ್ಯಾಣ
ಕಾರ್ಯಗಳನ್ನೆಲ್ಲ ಊರಲ್ಲಿ ಜಾರಿಗೊಳಿಸಿದ್ದರು. ನಮ್ಮ ಆ ತೋಪು ಊರ ಬೆಳವಣಿಗೆಯಿಂದಾಗಿ ಊರ
ಮಧ್ಯಕ್ಕೆ ಸೇರಿಕೊಳ್ಳುವಂತಿದ್ದು; ಈಗದರ ಸ್ಥಳಾಂತರವೇ ಸೂಕ್ತ ಪರಿಹಾರವಾಗಿ ಅನೇಕರಿಗೆ ಕಂಡಿತ್ತು.
ಶಾಲೆಯ ಕಟ್ಟಡಕ್ಕೂ ಅದರ ಮೈದಾನಕ್ಕೂ ಆಸ್ಪತ್ರೆಗೂ ಮತ್ತು ಸಮುದಾಯಭವನಕ್ಕೂ ಸ್ಮಶಾನಕ್ಕೆ
ಅಂಟಿಕೊಂಡಿದ್ದ ಗೋಮಾಳವೇ ಎಲ್ಲ ರೀತಿಯಿಂದಲೂ ಸೂಕ್ತವಾಗಿ ಕಂಡಿತ್ತು. ಬೆಳಕು ಹರಿಯುವುದರ ಒಳಗಾಗಿ
ಊರಿನ ಹೊಸದೊಂದು ಚಹರೆ ಬಂದೊದಗಿತ್ತು. ವೇಗವಾಗಿ ಕಾರ್ಯಗಳು ಚಾಚಿಕೊಳ್ಳುತ್ತಿದ್ದವು. ನಮ್ಮ ಕೇರಿಯ
ಕೆಲವರನ್ನು ಬಿಟ್ಟು ಇನ್ನಾರೂ ಆ ಕಲ್ಯಾಣಕ್ರಮಗಳನ್ನು ವಿರೋಧಿಸಲು ಸಾಧ್ಯವಿರಲಿಲ್ಲ. ಪೊಲೀಸ್
ಪಹರೆಯ ಜೊತೆಯಲ್ಲೇ ರಾಕ್ಷಸಾಕಾರದ ಲಾರಿಗಳೂ ಗರಗಸಗಳೂ ಗುಡ್ಡಗಳ ಸಮಮಾಡುವ ಯಂತ್ರಗಳೂ ಊರಿಗೆ ಬಂದು
ಆಗಲೇ ಕಾರ್ಯಮಗ್ನವಾಗಿದ್ದವು. ಸ್ಮಶಾನದ ಮರಗಳನ್ನು ಕಡಿಯಬಾರದೆಂದು ಕೇಳಿದವರ ಬಾಯನ್ನು ಗೌಡರು
ಮುಚ್ಚಿಸಿದ್ದರು. ಮತ್ತೆ ಕೆಲವರ ಜೇಬು ಬೆಚ್ಚಗೆ ಮಾಡಿ ಹೊಟ್ಟೆ ತುಂಬ ಕುಡಿಸಿ ಮುಂದೆ ಇದೇ
ಗೋಮಾಳದಲ್ಲಿ ಜಾರಿಗೆ ಬರುವ ಗರೀಬಿ ಸೈಟುಗಳಲ್ಲಿ ಎಲ್ಲರಿಗೂ ಮನೆ ಕಟ್ಟಿಸಿ ಕೊಡುವುದಾಗಿ ಆಸೆ
ಹುಟ್ಟಿಸಿ ಮಂಕುಬೂದಿ ಎರಚಿದ್ದರು.
ನಮ್ಮ ಪೂರ್ವಿಕರ ಜೀವದಂತಿದ್ದ ಆ ಹೆಮ್ಮರಗಳು ಕೊರಳು ಕತ್ತರಿಸಿಕೊಂಡು ರುಂಡ ಮುಂಡವಿಲ್ಲದೆ ಆ
ಗೋಮಾಳದಲ್ಲೆಲ್ಲ ಚಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದ್ದವು. ನರಮೇಧದ ಹತ್ಯೆಯ ರಾತ್ರಿಯ ವಾಸನೆಯಂತೆ
ಇಡೀ ಸ್ಮಶಾನ ಹಸಿರು ನಾಶದಿಂದ ನಿಜವಾದ ಸ್ಮಶಾನದಂತೆ ನನ್ನ ಕಣ್ಣಿಗೆ ಬಡಿಯಿತು. ವಿವಿಧ ಮರಗಳ
ರೆಂಬೆ ಕೊಂಬೆಗಳನ್ನೆಲ್ಲ ರಾಶಿ ರಾಶಿಯಾಗಿ ತರಿದು ಹಾಕಿ ಬೆಟ್ಟದಂತೆ ಮರದ ತುಂಡುಗಳನ್ನು
ಕೂಲಿಕಾರರು ಮಾಡುತ್ತಿದ್ದರು. ಮರ ಕೊಯ್ಯುವ ಆಧುನಿಕ ಯಂತ್ರಗಳ ಕರ್ಕಶ ಶಬ್ಧ ಯಾರೀ ನನ್ನ ತಾತ
ಮುತ್ತಾತ ಮುತ್ತಜ್ಜಿಯವರ ದೇಹವನ್ನೆಲ್ಲ ಕೊರೆಯುತ್ತಿರುವಂತೆ ಕೇಳಿಸಿ ಅಸಹಾಯಕನಾಗಿ ಇದನ್ನೆಲ್ಲ
ವಿರೋಧಿಸುವವರು ಯಾರೂ ಇಲ್ಲವೇ ಎಂದು ಕಂಗಾಲಾಗಿ ಸಿಟ್ಟಿನಿಂದ ಸುತ್ತ ಕಡೆ ನೋಡಿದೆ. ಆಗ ಬಹಳ ಹಿಂದೆ
ತಾಯವ್ವನ ಹೋಟೆಲ್ ಪ್ರವೇಶ ಮೆರವಣಿಗೆಯಲ್ಲಿ ಹುಲಿವೇಷ ಹಾಕಿ ಕುಣಿಯುತ್ತಿದ್ದ ಆ ಎರಡೂ
ಹುಲಿವೇಷದವರು ತರತರ ನಡುಗುತ್ತಾ ಬಿಕಿಬಿಕ್ಕಿ ಅಳುತ್ತಾ ನಮ್ಮ ಪೂರ್ವಿಕರು ಈಗ ಸತ್ತು ಹೋದರೆಂದು
ಆರ್ತವಾಗಿ ಅಯ್ಯೋ ಈಗ ಬಂದ್ಯಾಪ್ಪಾ ಬಾರೋ ಕಣ್ಣು ತುಂಬ ಈ ಸಿರಿಯ ನೋಡೋ ಎಂದು ಗೋಳಾಡತೊಡಗಿದರು.
ಮುಂಜಾವಿನಲ್ಲೇ ಅವರು ತಡೆಯಲು ಹೋಗಿ ಪೇದೆಗಳಿಂದ ತುಳಿಸಿಕೊಂಡು ಏಟು ತಿಂದು ಏನೂ ಮಾಡಲಾರದೇ ತೋಪಿನ
ಕೊನೆಯಲ್ಲಿ ರೋಧಿಸುತ್ತಿದ್ದರು.
ಅನೇಕರು ಸ್ಮಾಶಾನದ ಮತ್ತೊಂದು ತುದಿಯಲ್ಲಿ ನಿಂತು ತಮ್ಮ ಬಂಧುಬಳಗದ ನೆನಪಿನ ಮರಗಳು ಲಾರಿಯಲ್ಲಿ
ದಿಮ್ಮಿಯಾಗಿ ಮಲಗಿ ಹೊರಟು ಹೋಗುವುದನ್ನು ನೋಡುತ್ತ ಮೂಕವಾಗಿದ್ದರು. ನಿಜವಾದ ಹುಲಿಗಳಂತೆ
ಸುಬ್ಬೇಗೌಡರ ಇಬ್ಬರು ಶೂರ ಪುತ್ರರು ಆ ವನದ ಮರಗಳ ಕಡಿಯುವ ಉಸ್ತುವಾರಿಯನ್ನು ವಹಿಸಿಕೊಂಡು ತಮ್ಮ
ಹಿಂದೆ ಪೇದೆಗಳ ಕಟ್ಟಿಕೊಂಡು ಬಂದೂಕುಗಳನ್ನು ಹಿಡಿದುಕೊಂಡು ವ್ಯಾಘ್ರಗಳಂತೆ ಆ ನರ ಪ್ರಾಣಿಗಳ ಕಡೆ
ನೋಡುತ್ತ ನಗುತ್ತ ತೇಗುತ್ತ ಓಡಾಡುತ್ತಿದ್ದರು.
ಈ ಭೂಮಿ ನಮ್ಮದು ಈ ಮರಗಳನ್ನು ನಾವೇ ನೆಟ್ಟು ಬೆಳೆಸಿ ಕಾಡು ಮಾಡಿದ್ದೆಂದು ಲಿಖಿತ ಆಧಾರ ಪತ್ರವಾಗಿ
ತೋರಲು ನಮ್ಮವರ ಬಳಿ ಯಾವ ದಾಖಲೆಯೂ ಇರಲಿಲ್ಲ. ಮುನ್ನೆಚ್ಚರಿಕೆಯಾಗಿ ಆಗಲೇ ಗೌಡರ ಮಕ್ಕಳಿಬ್ಬರೂ
ಪೇದೆಗಳ ಜೊತೆ ಎರಡು ಬಾರಿ ಬಂದೂಕಿನಿಂದ ಗುಂಡು ಹಾರಿಸಿ ಕೆಲವರಿಗಾದರೂ ಇದ್ದ ಗುಂಡಿಗೆಯನ್ನು
ಹಿಡಿದು ಅಲ್ಲಾಡಿಸಿ ಓಡಿಸಿ ಬಿಟ್ಟಿದ್ದರು. ಮರಕೊಯ್ಯುವವರು ಸ್ವತಃ ಕಾಡಿನಲ್ಲೂ ಇಂತಹ ಮರಗಳನ್ನು
ನಾವೆಂದೂ ಕೊಯ್ದಿರಲಿಲ್ಲ ಎಂದು ಆಶ್ಚರ್ಯಪಡುತ್ತಾ ಒಟ್ಟು ಆ ಮರಗಳ ಸಂಪತ್ತನ್ನು ಲೆಕ್ಕಹಾಕಿ
ಸೋಜಿಗಪಡುತ್ತಿದ್ದರು.
ನಮ್ಮ ಆ ಮರಗಳು ಮುರಿದು ಬೀಳುತ್ತಿರುವುದನ್ನೇ ಏನೂ ಮಾಡಲಾರದೆ ಒಬ್ಬನೇ ನೋಡುತ್ತ ನಿಂತಿದ್ದೆ.
‘ತಾಕತ್ತಿದ್ದರೆ ಅದ್ಯಾನಾ ಕರ್ಕೊಂಡ್ ಬತೀಯೋ ಅದೇನ್ ಮಾಡ್ತೀಯೋ ಮಾಡಿ ತೋಸೋ ಲೇಯ್’ ಎಂದು ಗೌಡರ
ಹಿರಿಮಗ ಕೂಗಿ ಹೇಳಿದ. ಆ ಮರಗಳ ಬುಡದಿಂದ ನಮ್ಮ ಪೂರ್ವಿಕರ ಆತ್ಮ ರೋಧಿಸುತ್ತಿರುವಂತೆ ಭಾಸವಾಯಿತು.
ಅನೇಕ ನಮ್ಮ ಹಿರಿಯರ ರುಂಡ ಚೆಂಡಾಡಿದಂತೆ ಅಲ್ಲೆಲ್ಲ ಚೆಲ್ಲಾಡಿ ಅಸಂಖ್ಯಾತರ ಅಸ್ತಿಪಂಜರಗಳಂತೆಆ
ಮರಗಳು ಸಾವಿನ ರಾಶಿಯಾಗಿ ಬಿದ್ದುಕೊಂಡಿರುವುದನ್ನು ನೋಡಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ.
ನನ್ನ ಬಾಲ್ಯದಲ್ಲಿ ಹೂ ಹಣ್ಣು ತಂಪು ಕಾಯಿತಳನ್ನು ಕೊಟ್ಟು ನೆರಳಲ್ಲಿ ಉಯ್ಯಾಲೆ ಆಡಿಸಿ ಬೆಳೆಸಿದ
ತೊಟ್ಟಿಲಂತಿದ್ದ ಆ ನಮ್ಮ ಸ್ಮಶಾನದ ಜೀವದ ಕಾಡು ಮೊಟ್ಟಮೊದಲ ಬಾರಿಗೆ ಭೀಕರ ರುದ್ರಭೂಮಿಯಂತೆ ಕಂಡು
ತಲೆ ಸಿಡಿಯತೊಡಗಿತು. ನಾವು ಯಾವ ಕಾನೂನನ್ನು ತಂದರೂ ಈಗ ಈ ಸ್ಮಶಾನವನ್ನು ಉಳಿಸಿಕೊಳ್ಳಲು
ಸಾಧ್ಯವಿರಲಿಲ್ಲ. ಎಂತಹ ಕಲ್ಯಾಣ ಕಾರ್ಯಕ್ರಮಗಳಿಂದಲೂ ಮತ್ತದೇ ಅಂತಹ ನಮ್ಮ ಪೂರ್ವಿಕರ ಮರಗಳನ್ನೇ
ಇನ್ನೊಂದು ಜಾಗದಲ್ಲಿ ನಮಗೆ ಸೃಷ್ಟಿಸಿಕೊಡಲು ಯಾರಿಂದಲೂ ಸಾಧ್ಯವಿರಲಿಲ್ಲ. ಲಾರಿಗಳು ದಿಮ್ಮಿಗಳ
ಹೇರಿಕೊಂಡು ಷಹರದ ರಸ್ತೆ ಹಿಡಿದು ನನ್ನೆದುರೇ ಸಾಲಾಗಿ ಹೋಗುತ್ತಲೇ ಇದ್ದವು. ಗೌಡರು ಜರೂರಾಗಿ
ಸರ್ಕಾರಕ್ಕೆ ಪೂರ್ವಭಾವಿ ಕಾರ್ಯಗಳ ಪ್ರಗತಿಯನ್ನು ತೋರಿಸಿ ಮುಂದಿನ ಕ್ರಮಗಳಿಗಾಗಿ ಹಣ ಮಂಜೂರು
ಮಾಡಿಸಿಕೊಳ್ಳಬೇಕಾಗಿತ್ತು. ಹಾಗಾಗಿ ಶೀಘ್ರವಾಗಿ ಎಲ್ಲವೂ ಒಮ್ಮೆಗೇ ಘಟಿಸುತ್ತಿದ್ದವು. ಯಾವುದೋ
ದೆಹಲಿ ರಾಜಕಾರಣದ ಅಂಗವಾಗಿ ಅವರು ವಿಮಾನವೇರಿ ಮಕ್ಕಳಿಗೆ ಉಳಿದೆಲ್ಲವನ್ನೂ ವಹಿಸಿ
ಹೊರಟುಹೋಗಿದ್ದರು. ಆರು ವರ್ಷ ತನ್ನಂತಹ ಒಬ್ಬ ಗೌಡನನ್ನು ಸುತ್ತೇಳು ಹಳ್ಳಿಗೂ ದಿಲ್ಲಿಯ
ದೊರೆಯಂತಿದ್ದ ನನ್ನನ್ನು ಕೇಸಾಡಿಸಿ ಅನೇಕ ಕೆಟ್ಟ ಸುದ್ದಿಗಳಿಗೆ ಒಳಪಡಿಸಿ ತೊಂದರೆ
ಕೊಟ್ಟಿದ್ದನ್ನೇ ಕಾರಣವಾಗಿಟ್ಟುಕೊಂಡು ಗೌಡರು ನಮ್ಮ ಕೇರಿಯವರ ಮೇಲೆ ಕಣ್ಣಿಟ್ಟು ಹೀಗೆಲ್ಲ
ಮಾಡಿಸಿದ್ದಾರೆಂದು ಯಾರೋ ಹೇಳುತ್ತಿದ್ದರು. ನಮ್ಮ ಹಳೆಯ ಸಂಘದ ಯುವಕರು ನಗರದ ಯಾವ ಗಲ್ಲಿಯಲ್ಲಿ
ಬಜಾರಿನಲ್ಲಿ ಮೂಲೆಯಲ್ಲಿ ಹೊಟ್ಟೆಪಾಡಿಗಾಗಿ ಯಾವ್ಯಾವ ಬೀದಿಗಳಲ್ಲಿ ಏನೇನು ಮಾಡುತ್ತಿದ್ದಾರೋ ಎಂದು
ನೆನೆದುಕೊಂಡ.
ನನ್ನನ್ನು ಕರೆಯಲು ಬಂದಿದ್ದ ಯುವಕ ಹೇಳುತ್ತಿದ್ದ. ಈ ತೋಪಿನ ಮರಗಳನ್ನೆಲ್ಲ ಸರ್ಕಾರ ಮುಟ್ಟುಗೋಲು
ಹಾಕಿಕೊಳ್ಳುತ್ತಿಲ್ಲವೆಂದೂ ಅರಣ್ಯ ಇಲಾಖೆ ಸುಮ್ಮನೆ ನಾಟಕ ಆದುತ್ತಿವೆಯೆಂದೂ ಈಗ ಹೊಸದಾಗಿ ಗೌಡರು
ತಮ್ಮ ಮಕ್ಕಳ ಹೆಸರಲ್ಲಿ ತೆರೆದಿರುವ ಬೃಹತ್ ಸಾ ಮಿಲ್ಲಿಗೆ ನೇರವಾಗಿ ಇವೆಲ್ಲ ಸಾಗುತ್ತಿವೆಯೆಂದು
ಹೆದರುತ್ತಾ ಮೆಲ್ಲಗೆ ಉಸುರಿದ. ಸರ್ಕಾರದಿಂದಲೇ ಗೌಡರು ಆ ಮರಗಳ ಟೆಂಡರ್ ಪಡೆದು ಸ್ವಾಧೀನ
ಮಾಡಿಕೊಂಡಿದ್ದಾರೆಂದು ಇನ್ನಾರೋ ವಾದಿಸುತ್ತಿದ್ದರು. ನಮ್ಮ ಪೂರ್ವಿಕರ ಸಾಕ್ಷಿಯಂತಿದ್ದ ಆ
ವನವೆಲ್ಲ ಬೋಳಾಗುತ್ತಿತ್ತು. ಗರಗಸದಿಂದ ಸಮಗೊಂಡ ಮರದ ಬುಡಗಳು ಒಬ್ಬೊಬ್ಬರ ಸಮಾಧಿಯಂತೆ
ಕಾಣತೊಡಗಿದವು. ನನ್ನ ಕಣ್ಣಲ್ಲಿ ನನಗೇ ಅರಿವಾಗದಂತೆ ಕಣ್ಣೀರು ಕೆಳಗೆ ಬೀಳಲೋ ಬೇಡವೋ ಎಂಬಂತೆ
ನಿಂತಿದ್ದವು. ಯಾರೋ ನನ್ನನ್ನೂ ನನ್ನ ನೆನಪುಗಳನ್ನೂ ಭೀಕರವಾಗಿ ಹರಿದು ಚೂರು ಚೂರು ಮಾಡಿ
ನಗುತ್ತಿದ್ದಾರೆನಿಸಿ ಬೆಚ್ಚಿದೆ. ಯಾವನೊ ಒಬ್ಬ ಹತ್ತಿರ ಬಂದು ಇವಕ್ಕೆಲ್ಲ ತಲೆ ಹಾಕಬೇಡ ಎಂದೂ
ಎಲ್ಲೊ ಯಾವುದೊ ಲಡಾಸು ಟೆಂಪರರಿ ಕೆಲಸದಲ್ಲಿರುವ ನಿನಗೆ ಸಾಯುವ ತನಕ ನೆಮ್ಮದಿಯಾಗಿರುವಂತಹ
ಕೆಲಸವನ್ನು ಗೌಡರು ಸಾ ಮಿಲ್ಲಿನಲ್ಲಿ ಕೊಡಿಸುವುದಾಗಿಯೂ ನಾವು ಹೇಳಿದಂತೆ ಕೇಳಿಕೊಂಡು ಸುಮ್ಮನಾದರೆ
ಗೌಡರು ಏನು ಬೇಕಾದರೂ ಮಾಡಿಕೊಡಲು ಸಿದ್ದರೆಂದು ಹೇಳಿದ. ನನ್ನ ಮೈ ಬೆಂಕಿಯಂತೆ ಹೊತ್ತಿಕೊಂಡಿತು.
ಆಗ ಹಿಂದೆ ತಾಯವ್ವನ ಹೋಟೆಲ್ ದಾಳಿಯಲ್ಲಿ ಆದದ್ದೆಲ್ಲವನ್ನು ತಾಯವ್ವ ಮರೆತಿದ್ದಾಳೆಂದೂ ಓದಿ
ವಿದ್ಯಾವಂತನಾಗಿರುವ ನಿನ್ನ ಬಗ್ಗೆ ಗೌರವ ಇದೆಯೆಂದೂ ನುಡಿದ. ಇದೆಲ್ಲಕ್ಕಿಂತ ಮೀರುವಂತೆ ಹೇಗೋ
ಊರ್ವಶಿಯನ್ನು ಆಗ ನೀನು ಕೆಡಿಸಲು ಹೋಗಿದ್ದರಿಂದ ಆಕೆಗೂ ನಿನಗೂ ಕತೆಯಾಗಿ ಅವಳಲಗ್ನವೇ ಕೂಡಿಬರದೆ
ಉಳಿದುಕೊಂಡಿರುವುದರಿಂದ ನೀನು ಇಷ್ಟಪಟ್ಟರೆ ಈಗವಳನ್ನು ಇಟ್ಟುಕೊಳ್ಳಬಹುದೆಂದೂ ಗಂಭೀರವಾಗಿ ಕಿವಿಗೆ
ತುಂಬಿದ. ಅವನ ಮುಖದ ಮೇಲೆ ಹೇಸಿಗೆ ಸುರಿಯುವಷ್ಟು ಸಿಟ್ಟು ಬಂದರೂ ನಾನೇನೂ ಮಾಡುವಂತಿರಲಿಲ್ಲ.
ಅವನು ನಿಜ ಹೇಳಿದನೋ ಸುಳ್ಳು ಹೇಳಿದನೋ ಒಟ್ಟಿನಲ್ಲಿ ಗೇಲಿ ಮಾಡಿ ಅವಮಾನ ಮಾಡುತ್ತಿದ್ದಾನೆನಿಸಿ
ಸಿಟ್ಟಿನ ಜೊತೆಗೆ ದುಃಖವೂ ಬಂದು ಥೂ ಹೋಗೋ ಸೂಳೇಮಗನೇ ಎಂದು ಅವನನ್ನು ತಳ್ಳಿ ಇತ್ತಕಡೆ ಬಂದೆ.
ಇದನ್ನೆಲ್ಲ ನೋಡಲಾರೆನೆಂಬಂತೆ ಸೂರ್ಯ ಮುಳುಗುತ್ತಿದ್ದ. ಊರು ಮತ್ತದನ್ನೆಲ್ಲ ಅರಗಿಸಿಕೊಳ್ಳುವಂತೆ
ರಾತ್ರಿಯ ಮುಖಕ್ಕೆ ಹಾತೊರೆಯುತ್ತಿತ್ತು. ಕತ್ತಲು ಮುತ್ತಿಕೊಳ್ಳುತ್ತಿತ್ತು. ಶವದ ನೆರಳಿನಂತಹ
ಪೆಚ್ಚು ಮೋರೆಯಲ್ಲಿ ಕೇರಿಗೆ ಬಂದೆ. ಯಾರಿಗೂ ದೊಡ್ಡ ನಷ್ಟವಾದಂತೆ ಕಾಣುತ್ತಿರಲಿಲ್ಲ. ಏನೋ ಬಂದು
ಎಂದಿನಂತೆ ತಮಗಿಷ್ಟವಿಲ್ಲದ್ದು ಘಟಿಸಿತೆಂಬಂತೆ ಅದರ ಬಗ್ಗೆ ಮಾತನ್ನೂ ಆಡದೆ ಅವರವರ
ಮುತುವರ್ಜಿಗಳಲ್ಲಿ ಮುಳುಗಿದ್ದರು. ತಾತನ ಮನೆ ಕಡೆ ಹೋಗಲು ಅಲ್ಲಿ ನನಗಾಗಿ ಯಾರೂ ಇರಲಿಲ್ಲ. ಆ
ಸಿರಿ ವನವೇ ನಾಶವಾದಮೇಲೆ ಊರಲ್ಲಿ ನನಗಿದ್ದ ಆ ಏಕೈಕ ಕೊಂಡಿಯೂ ಕಳಚಿಹೋಯಿತೆಂದು ಸುಸ್ತಾಗಿ ಹೋದೆ.
ಸ್ವತಃ ನಾನೇ ಎಲ್ಲಕ್ಕೂ ವಿದಾಯ ಹೇಳಿ ಸ್ಮಾಶಾನದ ಆ ಮಣ್ಣ ಒಳಕ್ಕೆ ಆ ಮರಗಳ ಸಾವಿನ ಕೂಪಕ್ಕೂ ನಮ್ಮ
ಪೂರ್ವಿಕರ ಸಮಾಧಿಗಳ ಆಳಕ್ಕೆ ಇಳಿದು ಹೋದವನಂತೆ ಭ್ರಮೆಗೆ ಒಳಗಾದೆ.
ಯಾಕೋ ನಮ್ಮ ಹಿತ್ತಲಲ್ಲಿ ಆಗ ಇದ್ದ ಅಜ್ಜಿಯ ಬಿಲ್ಪತ್ರೆ ಮರ ನೆನಪಾಗಿ ಹಿತ್ತಲಿಗೆ ಹೋದೆ. ಮಬ್ಬು
ಕತ್ತಲಲ್ಲಿ ಬಿಲ್ಪತ್ರೆ ಮರ ಥೇಟ್ ನಮ್ಮ ಅಜ್ಜಿಯಂತೆಯೇ ಹಳೆ ಸೀರೆ ತೊಟ್ಟು ಕಾಲಾಂತರದಿಂದಲೂ ಅಲ್ಲೇ
ಯಾರಿಗಾಗಿಯೋ ಕಾದು ಅದೇ ಮರವಾಗಿ ಕುಳಿತಿದ್ದಾಳೆಂಬಂತೆ ಕಂಡಿತು. ಅದರ ಕಾಯಿಗಳು ಕತ್ತಲಲ್ಲಿ
ತೂಗಾಡುತ್ತಿದ್ದವು. ಬಿಲ್ಪತ್ರೆ ಮರದ ಆ ಕತೆಯ ಬ್ರಾಹ್ಮಣ ಹುಡುಗಿಯೂ ಆ ತಾಯವ್ವನೂ ಅವಳ ಮಗಳು
ಊರ್ವಶಿಯೂ ಯಾಕೋ ನನ್ನೊಳಗೆ ಕಾಡತೊಡಗಿದರು. ನನ್ನ ತಾಯಿ ನೆಟ್ಟಿದ್ದ ಸಂಪಿಗೆ ಮರ ಒಣಗಿ ಹೋಗಿತ್ತು.
ಅಲ್ಲಿ ಹಸಿರು ಸತ್ತು ಹೋಗಿತ್ತು. ಈ ಪಾಪಿ ಇಂತಹ ಅವೇಳೆಯಲ್ಲಿ ಇಲ್ಲಿಗೆ ಯಾಕೆ ಬಂದಿದ್ದಾನೆಂದು
ನಮ್ಮ ತಾತನ ಕಾಲದ ಆ ಮನೆಯ ಕೆಲವರು ನೋಡಿ ಮುಖ ತಿರುವಿಕೊಡರು. ನನ್ನ ತಾಯಿಯ ಜೊತೆಯಲ್ಲೇ ಆ ಸಂಪಿಗೆ
ಮರವೂ ಜೀವ ಕಳೆದುಕೊಂಡಿತ್ತು. ಯಾಕೋ ಆ ಬಿಲ್ಪತ್ರೆ ಮರವನ್ನೂ ಸಂಪಿಗೆ ಮರವನ್ನು ತಬ್ಬಿಕೊಂಡು
ಆಕಾಶಕ್ಕೆ ಮುಖವಿಟ್ಟೆ. ಹೊಳಪು ನಕ್ಷತ್ರಗಳು ಕುಣಿಯುತ್ತಿದ್ದವು.
ಕತ್ತಲು ಮುತ್ತಿಕೊಳ್ಳುತ್ತಿದ್ದಂತೆ ಇಲ್ಲಿರುವುದೇ ಭಯವಾಗಿ ಒಂದು ವೇಳೆ ಗೌಡರು ನನ್ನನ್ನು
ಹೊಡೆಸಿಯೋ ಕೊಂದು ಹಾಕಿಸಿಯೋ ಮುಂದೆ ಇಡೀ ಘಟನೆಗೆ ಇನ್ನೊಂದು ಬಣ್ಣ ಬರಿಸಿದರೆ.... ಎಂದು ಏನೇನೋ
ಕಲ್ಪನೆಗಳು ಬಂದು ಬೆವೆತು ಹೋದೆ. ಅಲ್ಲಿಂದ ಬೀದಿಗೆ ಬಂದೆ.ಕಣ್ಣ ತುಂಬ ದೇಹದ ತುಂಬ ನರನಾಡಿ
ರಕ್ತಗಳ ತುಂಬ ಮನಸ್ಸು ಮತ್ತು ಉಸಿರಿನ ತುಮ್ಬ ಅದೇ ಆ ನಮ್ಮ ಸ್ಮಶಾನ ಆವರಿಸಿಕೊಂಡು ಆ ಬಾಲ್ಯ ಆ
ಊರು ಆ ಜನ ಆ ಕಾಲದ ತನ್ನ ಪೂರ್ವಿಕರ ಕನಸುಗಳು ಎಲ್ಲ ಎಲ್ಲವೂ ಮುಗಿಲಿನಂತೆ ಚದುರುತ್ತ ನನ್ನ
ತಲೆಯೊಳಗೆ ಮೇಳೈಸುತ್ತಾ ತೂರಾಡುವಂತಾಗಿ ಊರ ಗುಡಿ ಮುಂದೆ ಬಂದೆ. ಹೇಳಲಾರದ ಆದರೆ
ಬಚ್ಚಿಟ್ಟುಕೊಳ್ಳಲಾರದ ಸಂಕಟದಿಂದ ಮೈ ಮನಸ್ಸು ಬೇಯತೊಡಗಿದವು. ಇಲ್ಲಿಂದ ಈ ರಾತ್ರಿಯೇ ಪೇಟೆಗೆ
ಹಿಂದಿರುಗಬೇಕೆಂದು ತೀರ್ಮಾನಿಸಿದೆ. ನನ್ನೊಳಗಿನ ಸಂಕಟ ಹತಾಶೆ ತಿರಸ್ಕಾರಗಳನ್ನೆಲ್ಲ ಉಸಿರಾಟ
ಮಾಡಿಕೊಂಡೆ. ಇಂದಲ್ಲ ನಾಳೆ ನಾಳೆಯಲ್ಲ ನಾಡಿದ್ದು ನಾಡಿದ್ದಲ್ಲಾಅಚೆ ನಾಡಿದ್ದು ಅಥವಾ ಮುಂದೊಂದು
ಕಾಲಕ್ಕೆ ಇನ್ನೊಂದು ಉಗಕ್ಕೆ ಇಲ್ಲವೇ ಇನ್ನೆಂದೋ ಒಂದು ದಿನ ಆ ಒಂದು ದಿನ ಆ ಒಂದು ಕ್ಷಣಕ್ಕಾದರೂ
ಇಂತಹ ಎಲ್ಲ ವಿಕೃತಿಗೂ ಒಂದು ಸಮಯ ಬಂದೇ ಬರುತ್ತದೆ. ಎಲ್ಲ ವಿನಾಶಕ್ಕೂ ಒಂದು ಅಂತಿಮ
ದಿನವಿರುತ್ತದೆ. ಆವರೆಗೆ ಕಾಯಲು ನನ್ನಿಂದಾಗದಿದ್ದರೂ ಯಾರಾದರೂ ಕಾಯುತ್ತಾರೆ. ಬರಬೇಕಾದವರು ಬಂದೇ
ಬರುತ್ತಾರೆ. ಎಂದು ನನ್ನನ್ನು ನಾನೇ ಸಂತೈಸಿಕೊಂಡೆ.ಆದರೂ ಸಮಾಧಾನವಿರಲಿಲ್ಲ. ಗುಡಿಯ ಪಡಸಾಲೆ ಮೇಲೆ
ಹಣತೆಗಳ ಬೆಳಕು ಚೆಲ್ಲಾಡುತ್ತಿತ್ತು. ಆಲಿ ಬೀದಿಯಲ್ಲಿ ಆಟವಾಡಿಕೊಳ್ಳುತ್ತಿದ್ದ ಹೈಕಳು ನನ್ನ ಕಡೆ
ಕುತೂಹಲದಿಂದ ನೋಡುತ್ತಿದ್ದವು. ಬುದ್ಧನಿಗೆ ಜ್~ಝಾನೋದಯವಾದದ್ದು ಒಂದು ಮರದ ಕೆಳಗಲ್ಲವೇ ಆ ಮರ
ತಾಯಿ ನೆರಲಲ್ಲಲ್ಲವೆ ಆ ಜೀವದ ಅರಿವು ಮೂಡಿದ್ದು ಮರದ ಹಸಿರಲ್ಲಲ್ಲವೇ ಎಂದು ನನಗೆ ನಾನೇ
ಹೇಳಿಕೊಂಡೆ. ಸ್ಮಶಾನದ ಕಡೆಯಿಂದ ಆ ಕತ್ತಲಲ್ಲೂ ದೊಂದಿ ಹೊತ್ತಿಸಿಕೊಂಡು ಮರ ಕಡಿಯುತ್ತಿದ್ದವರ
ಅಸ್ಪಷ್ಟ ಮಾತುಗಳು ಗಾಳಿಯಲ್ಲಿ ತೇಲಿ ಬರುತ್ತಿದ್ದವು. ಮರ ಕಡಿಯುವ ಸಿಗಿಯುವ ತುಂಡರಿಸುವ ನಿರಂತರ
ಕೊಡಲಿಯ ಸದ್ದು ನನ್ನ ತಲೆ ಚೆಚ್ಚತೊಡಗಿದವು. ಕಣ್ಣು ಮುಚ್ಚಿದ ಕೂಡಲೆ ಇಡೀ ಆ ನಮ್ಮ ತೋಪಿನಲ್ಲಿ
ಬರೀ ಮರದ ಬೊಡ್ಡೆಗಳು ಒಂದೊಂದು ಸಮಾಧಿಯಂತೆ ಭಾಸವಾಗುತ್ತಿದ್ದವು. ಬೀಸುವ ಗಾಳಿಯಲ್ಲಿ ನಮ್ಮ
ನೆನಪುಗಳು ಅಳಿಸಿ ಹೋಗುತ್ತಿದ್ದವು. ಕೇರಿಯಲ್ಲಿ ಸತ್ತವರ ಸೂತಕದಂತೆ ನಾಯಿಯೊಂದು ನಡುಬೀದಿಗೆ ಬಂದು
ಊಳಿಡುತ್ತಿತ್ತು.
ಆ ಹುಡುಗರು ಗುಡಿಯ ಪಡಸಾಲೆಯಲ್ಲಿ ಖುಷಿಯಿಂದ ಕುಣಿಯುತ್ತಿದ್ದರು. ಅವರ ಬಳಿ ಹೋಗಿ ಹತ್ತಿರಕ್ಕೆ
ಕರೆದೆ. ದಡಬಡನೆ ಮುಂದೆ ಬಂದು ಕುಳಿತರು. ದೀಪದ ಬೆಳಕಿನಲ್ಲಿ ಅವರ ಎಳೆ ಮುಖಗಳು
ಹೊಳೆಯುತ್ತಿದ್ದವು. ಯಾವುದೇ ಬಗೆಯಲ್ಲಿ ಎಂತದೇ ನೋವಾಗಲಿ ಹಲ್ಲೆಯಾಗಲಿ ನಾಶವಾಗಲಿ ಎಷ್ಟೇ
ಕಾಲದಿಂದಲೂ ಆಗುತ್ತಲೇ ಬಂದರೂ ಅವನ್ನೆಲ್ಲ ಹಣ್ಣು ಮಾಡಿಕೊಂಡು ಬಾಯಲ್ಲಿಟ್ಟು ಜಗಿದು ರಸಮಾಡಿಕೊಂಡು
ನುಂಗಿ ಅರಗಿಸಿಕೊಂಡು ಜೀವದ ಆಟಗಳ ನಿರಂತರವಾಗಿ ಆಡುತ್ತಲೇ ಇರುತ್ತೇವೆಂಬಂತೆ ಆ ಹುಡುಗರು ಹಣತೆಯ
ಬೆಳಕಲ್ಲಿ ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದರು. ನಾನೊಂದು ದೊಡ್ಡ ನಿಟ್ಟುಸಿರು ಬಿಟ್ಟು ಕತೆ
ಹೇಳಲು ತೊಡಗಿದೆ.
ಒಂದೂರಿನಲ್ಲಿ ಒಂದು ತೋಪಿತ್ತಂತೆ. ಅದು ಯಾವತ್ತೂ ಅಳಿಯದ ಆಕಾಶದಂತೆ ಅದರೆತ್ತರಕ್ಕೂ ಅದರಗಲಕ್ಕೂ
ಬೆಳೆಯುತ್ತಿತ್ತಂತೆ. ಅದರೊಳಗಿಂದ ಜೀವ ಪಕ್ಷಿಗಳು ಹುಟ್ಟಿ ಬೆಳೆದು ಹಾರಿ ಬಂದು
ಹಾರಾಡುತ್ತಿದ್ದವಂತೆ. ಎಂದು ಹೇಳಿ ಎಂದೆಂದೂ ಆ ತೋಪಿಗೆ ಅಲ್ಲಿನ ಪಾಡಿಗೆ ಅಂತ್ಯವೇ ಇಲ್ಲದಂತೆ
ಎಂದೂ ಎಂದೆಂದೂ ಅದು ವಿಕಾಸವಾಗುತ್ತ ನಮ್ಮನ್ನು ಬೆಳೆಸುತ್ತಿರುತ್ತದೆಂದು ಹೇಳಿ ಕತೆ ಮುಗಿಸಿ
ಎದ್ದು ಆ ಕತ್ತಲ ರಾತ್ರಿಯಲ್ಲೇ ಪೇಟೆಯ ನನ್ನ ಬಾಳಿನತ್ತ ಹೊರಟೆ. ನಮ್ಮ ಪೂರ್ವಿಕರ ಮರಗಳ ವಾಸನೆ
ಮೂಗು ಹಿಂಡುತ್ತಿತ್ತು. ಬೆನ್ನಹಿಂದೆ ಅವುಗಳ ರೆಂಬೆ ಬಿಸಿಲಿನ ಗಾಳಿ ಕಂಪು ಹಿಂಬಾಲಿಸುತ್ತಿರುವಂತೆ
ಕಂಡಿತು. ನಾನು ನನ್ನ ದಾರಿ ಹಿಡಿದು ಕತ್ತಲಲ್ಲೇ ನಡೆಯುತ್ತಿದ್ದೆ.
ಬರೆದದ್ದು : ೧೯೯೫, ಪ್ರಕಟವಾದದ್ದು : ೧೯೯೮
ಪ್ರಜಾವಾಣಿ ದೀಪಾವಳಿಯ ವಿಶೇಷಾಂಕ
ಬರಹಕ್ಕೆ ಇಳಿಸಿದವರು : ಅನ್ನಪೂರ್ಣ ಸುಬ್ಬರಾವ್
ಪ್ರಾರಂಭಿಸಿದ್ದು : ೧೪-೧೧-೨೦೦೯
ಮುಗಿಸಿದ್ದು : ೩೦-೧೧-೨೦೦೯