ಆಶಯಗಳು
- ಕನ್ನಡದ ಮೂಲಕ ಬದುಕು-ಸಂಸ್ಕೃತಿಗಳ ಕುರಿತಾದ ಧ್ಯಾನಕ್ಕೆ ಒಂದು ತಾಣ.
- ಕನ್ನಡೇತರರಿಗೆ ಕನ್ನಡ ಸಾಹಿತ್ಯ-ಸಾಂಸ್ಕೃತಿಕ ಪ್ರಪಂಚಕ್ಕೆ ಹೆಬ್ಬಾಗಿಲು.
- ನವಪೀಳಿಗೆಯ ಬರಹಗಾರರಿಗೆ ಸಾಹಿತ್ಯಲೋಕ ಪ್ರವೇಶಿಸಲು ಪ್ರೇರಕ ವೇದಿಕೆ.
- ಅಂತರ್ಜಾಲದಲ್ಲಿ, ಕಂಪ್ಯೂಟರ್ ಪ್ರಪಂಚದಲ್ಲಿ ಕನ್ನಡ ಬದುಕುಳಿಯಲು ಅಗತ್ಯವಾದ ಸಾಧನಗಳ
ತಯಾರಿಕೆಗೆ ಪ್ರೇರಕ ಸಂಸ್ಥೆ.
- ಸಾಹಿತ್ಯದಿಂದ ಪ್ರೇರಣೆ ಪಡೆಯುವ ಸಾಹಿತ್ಯೇತರ ಮೌಲಿಕ ಸಂಸ್ಥೆಗಳ ಹುಟ್ಟಿಗೆ ಅಥವಾ ಬೆಳವಣಿಗೆಗೆ
ಪ್ರೇರಕ ವೇದಿಕೆ.
- ಬಹುಮುಖಿ ಸಂಸ್ಕೃತಿಯ ಪ್ರತಿನಿಧಿಗಳಾದ ಇತರ ಭಾರತೀಯ ಭಾಷೆಗಳ ಬಗ್ಗೆ ಕಾಳಜಿ ಹೊಂದಿರುವವರಿಗೆ
ಇಂತಹ ವೇದಿಕೆ ಸೃಷ್ಟಿಸಿಕೊಳ್ಳಲು ನೆರವಾಗುವ ಸಂಸ್ಥೆ.
ಕಸಾಕದ ಧೋರಣೆ
- ಆಧುನಿಕ ತಂತ್ರಜ್ಞಾನ ಅಪಾರ ಶಕ್ತಿಶಾಲಿ, ಸೃಷ್ಟಿ-ಸ್ಥಿತಿ-ಲಯ ಎಲ್ಲವೂ
ಇದಕ್ಕೆ ಸಾಧ್ಯ. ಬೇರೆಯ ಮೂಲಗಳಿಂದ ಸೃಷ್ಟಿಯಾದ ಸಂಸ್ಕೃತಿಗಳು, ಆ ಸಂಸ್ಕೃತಿಗಳನ್ನೊಳಗೊಂಡಿರುವ
ಭಾಷೆಗಳು ತಂತ್ರಜ್ಞಾನದ ಮೂರನೇಯ ಕಣ್ಣಿಗೆ ಗುರಿಯಾಗದಿರಬೇಕಾದರೆ, ಆಧುನಿಕ ತಂತ್ರಜ್ಞಾನದ ಎಲ್ಲಾ
ಮುಖ್ಯ ಸಾಧನಗಳಲ್ಲಿ ತಮ್ಮ ಛಾಪು ಮೂಡಿಸಬೇಕು. ಆಗ ತಂತ್ರಜ್ಞಾನ ’ಸ್ಥಿತಿ’ಕರ್ತವಾಗುತ್ತದೆ.
- ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಸಮಷ್ಟಿಯಿಂದ ಸ್ಫೂರ್ತಿ ಪಡೆದ ಹೃದಯವಂತ, ಸ್ವೋಪಜ್ಞ,
ವಿಚಾರಶೀಲ, ಪ್ರಜ್ಞಾವಂತ ಮನಸ್ಸು ಅತ್ಯಾವಶ್ಯಕ.
- ಇಂಗ್ಲೀಷ್ ನಮಗೆ ಆವಶ್ಯಕ. ಇಂದು ಇಂಗ್ಲೀಷ್ ವಿಶ್ವಾದ್ಯಂತ ಪ್ರಬಲ ಶಕ್ತಿಯಾಗಿದೆ. ಕನ್ನಡವೇ
ಮೊದಲಾದ ಭಾಷೆಗಳು ತಮ್ಮ ಸ್ಥಾನವನ್ನು ರಕ್ಷಿಸಿಕೊಳ್ಳುವುದಲ್ಲದೆ, ಉಳಿದಿರುವ
ಅವಕಾಶವನ್ನುಪಯೋಗಿಸಿಕೊಂಡು ಹೊಸ ಆಯಾಮಗಳನ್ನು ಸೃಷ್ಟಿಸಿಕೊಂಡು ಜೀವಂತವಾಗಿರಲು ಇಂಗ್ಲೀಷನ್ನು
ಯಥೋಚಿತವಾಗಿ ಬಳಸಿಕೊಳ್ಳಬೇಕು.
- ಇತರ ಭಾರತೀಯ ಭಾಷೆ-ಸಂಸ್ಕೃತಿಗಳ ಪ್ರತಿನಿಧಿ ವೇದಿಕೆಗಳೊಂದಿಗೆ ಸಾಂಸ್ಕೃತಿಕ ಕೊಡು-ಕೊಳ್ಳುವಿಕೆ
ಮೇಲ್ಕಂಡ ಎಲ್ಲಾ ಆಶಯಗಳಿಗೆ ಪೂರಕವಾಗುತ್ತದೆ ಎನ್ನುವುದು ಕಸಾಪದ ನಂಬಿಕೆ. ಬೇರೆ
ಭಾಷೆ-ಸಂಸ್ಕೃತಿಗಳನ್ನು ಕನ್ನಡಕ್ಕೆ ಪರಿಚಯಿಸುವುದು ಕಸಾಪದ ಮಹತ್ವಾಕಾಂಕ್ಷೆಗಳಲ್ಲೊಂದು.
ನಮ್ಮ ನಂಬಿಕೆ
- ಜಾತ್ಯತೀತತೆಯಲ್ಲಿ,
- ವಾಕ್ ಸ್ವಾತಂತ್ರ್ಯದಲ್ಲಿ,
- ವಾಕ್ ಸ್ವಾತಂತ್ರದ ವೈಯಕ್ತಿಕ ಅಹಂಕಾರಕ್ಕೆ ಮೇಲುಗೈ ನೀಡದೆ - ಇತರರ ಮಾತುಗಳನ್ನು
ಕೇಳಿಸಿಕೊಳ್ಳುವ ತಾಳ್ಮೆಯಲ್ಲಿ,
- ಕನ್ನಡಕ್ಕೂ ಒಂದು ಪ್ರಮುಖ ಸ್ಠಾನವಿದೆ - ಅದು ಬದುಕುಳಿಯಬಲ್ಲುದು ಎಂಬ ಆತ್ಮ ವಿಶ್ವಾಸದಲ್ಲಿ,
- ಈ ಆತ್ಮವಿಶ್ವಾಸದಲ್ಲಿ ಇತರ ಕಡೆಯಿಂದ ಬರುವ ಉತ್ತಮವಾದುದಕ್ಕೆಲ್ಲ ಕಣ್ಮುಚ್ಚಿಕೊಳ್ಳದೆ
ಸ್ವೀಕರಿಸುವಲ್ಲಿ,
- ಕನ್ನಡದ ಸ್ವಾಭಿಮಾನ ದುರಭಿಮಾನವಾಗದಂತೆ ಕಾಯ್ದುಕೊಳ್ಳುವ ಸಜ್ಜನಿಕೆಯಲ್ಲಿ,
- ಇತರರಿಗೂ ಗೌರವ ತೋರಿಸುತ್ತಲೇ ‘ನಮ್ಮತನವನ್ನು’ ಕಾಯ್ದುಕೊಳ್ಳುವಲ್ಲಿ,
- ಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆ ಮುಂತಾದವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ,
- ಇದೆಲ್ಲ ಮಾಡುತ್ತಲೆ ‘ಲಾಭಬಡುಕತನದಿಂದ’ ದೂರ ಉಳಿಯುವಲ್ಲಿ,
- ಲಾಭ ಬೇಡ, ನಿಜ, ಆದರೆ ಮಾಡುತ್ತಿರುವುದು ಸಹ ಕಡಿಮೆ ಏನಲ್ಲ ಎಂದು ಮುಂದುವರಿಯುತ್ತ ಹೋಗುವಲ್ಲಿ,
- ವಿದ್ಯಾರ್ಥಿಗಳಿಗೆ, ಆಕಾಡೆಮಿಕಲ್ಲಾಗಿ ಕನ್ನಡ ಸಾಹಿತ್ಯವನ್ನು, ಕನ್ನಡಿಗರಿಗೆ, ಕನ್ನಡೇತರರಿಗೆ,
ಸಾಹಿತ್ಯವನ್ನು ಅಧ್ಯಯನ ಮಾಡಲಿಚ್ಛಿಸವವರಿಗೆ, ಕನ್ನಡ ಸಾಹಿತ್ಯ.ಕಾಂ ನ್ನು ಅತ್ಯುತ್ತಮ ಆಕರ
ಕೇಂದ್ರವಾಗಿಸಿ ಬೆಳೆಸುವ ಶ್ರಮದಲ್ಲಿ,
- ಕನ್ನಡದ ಮುಂದೆ ನನ್ನನ್ನು -ಅಷ್ಟೇ ಏಕೆ ನಿಮ್ಮನ್ನೂ ತೃಣೀಕರಿಸಿಬಿಡುವಲ್ಲಿ,
- ಮೇಲಿನೆಲ್ಲ ನಂಬಿಕೆಗಳನ್ನು ತಪ್ಪಾಗಿ ಅರ್ಥೈಸ ಬೇಡಿ ಎಂದು ವಿನಯದಿಂದ ಕೇಳಿಕೊಳ್ಳುವಲ್ಲಿ
- ನಮ್ಮ ನಂಬಿಕೆಗೆ ನೀವು ಧ್ವನಿಗೂಡಿಸುತ್ತೀರೆಂದು, ಬೆಂಬಲಿಸುತ್ತೀರೆಂದು ನಂಬುವಲ್ಲಿ, ಒಂದಷ್ಟು
ಕಹಿ ಅನುಭವಗಳಾದರೂ ಲೆಕ್ಕಿಸದೆ ಮುನ್ನುಗ್ಗುತ್ತಾ ಹೋಗುವಲ್ಲಿ ಮತ್ತು ಹೆಚ್ಚಾಗಿ ನಿಮ್ಮಲ್ಲಿ
ಮತ್ತು ವ್ಯಕ್ತಿಗಿಂತಲೂ ದೊಡ್ಡದಾದ ‘ಕನ್ನಡ’ದಲ್ಲಿ.
-ಕೋಮುವಾದವನ್ನು ಪಕ್ಷಾತೀತವಾಗಿ ಖಂಡಿಸುವಲ್ಲಿ
- ರಾಜಕೀಯದಲ್ಲಿ ಧರ್ಮದ ದುರ್ಬಳಕೆಯನ್ನು ಪಕ್ಷಾತೀತವಾಗಿ ವಿರೋಧಿಸುವಲ್ಲಿ
- ಅಲ್ಪಸಂಖ್ಯಾತರ, ಅಸಂಘಟಿತ ಕಾರ್ಮಿಕರ ಮೇಲೆ ನಡೆಯುವ/ನಡೆಯಬಹುದಾದ ರಾಜಕೀಯ, ಸಾಮಾಜಿಕ,
ಧಾರ್ಮಿಕ, ಆರ್ಥಿಕ ದಬ್ಬಾಳಿಕೆಗಳನ್ನು ಶೋಷಣೆಗಳನ್ನು ಖಂಡಿಸುವಲ್ಲಿ
- ಅಂತಹ ಮನಸ್ಸುಗಳನ್ನು ಹುಡುಕುವಲ್ಲಿ
- ಕನ್ನಡಸಾಹಿತ್ಯ.ಕಾಂ ನನ್ನು ಆ ಗುರಿಯತ್ತ ನಡೆಸುವ ಹೆಬ್ಬಯಕೆಯನ್ನು ಎಂತಹ ವಿರೋಧವೇ ಇದ್ದರೂ
ಹತ್ತಿಕ್ಕದೇ ಸಾಗುವಲ್ಲಿ..
- ಇದೆಲ್ಲದರ ಮಧ್ಯೆ ಕುಸಿದು ಬೀಳದಿರುವುದರಲ್ಲಿ..