ಅನುಭಾವ ಗೀತೆಗಳು
ಎರಡು ಗೀತೆಗಳು
ಶಿಶುನಾಳ ಶರೀಫ್

೧. ಪಾಲಿಸಯ್ಯ ಪಾರ್ವತಿಪತಿ
-ಶಿಶುನಾಳ ಶರೀಫ್

ಪಾಲಿಸಯ್ಯಾ ಪಾರ್ವತಿಪತಿ
ತ್ರಿಲೋಕದೋಳ್ ವಿರತಿ ||ಪ||

ಗಂಗಾಧರನ ಸ್ತುತಿ
ಧ್ಯಾನಿಸುವ ಆತ್ಮಾಭಿರತಿ
ಕರುಣಿ ಕೈಲಾಸಕಧಿಪತಿ ||೧||

ಗಿರಿಜಾರಮಣನ ಸ್ತುತಿ
ಭಜಿಸಿ ಶಿವಯೋಗ ಸ್ಥಿತಿ
ಸಿದ್ಧಶಿವಯೋಗಿ ಸುಮತಿ ||೨||

ಬೇಗನೆ ಹೊಂದಿಸು ಸದ್ಗತಿ
ಶಿಶುನಾಳಧೀಶನೇ ಗತಿ
ಕೊಡು ಬೇಗನೆ ಮುಕುತಿ ||೩||
*
*
*
೨. ಏನಿದು ಪೇಳು ಆತ್ಮಗೆ ಪರಮಾತ್ಮಗೆ
-ಶಿಶುನಾಳ ಶರೀಫ್

ಏನಿದು ಪೇಳು ಆತ್ಮಗೆ ಪರಮಾತ್ಮಗೆ ||ಪ||

ನಿನ್ನ ನಿಜವನು ತಿಳಿಯದೆ ಭವದೊಳು
ಮುಳು ಮುಳುಗಿ ಶುಭ ಉಳಿಯದೆ ನೀ ||೧||

ಪರಮಸಾಗರ ಜೀವನ ಧರೆಗಾಳ್ದ ಈ ಘನ
ಅರಿಯದವಗೆ ಬರೆ ಉಸುರಿದರೇನಿದು
ಸುರ ಅಜ ಭವ ರುದ್ರಾದಿಗಳಿಗೆ ನೀ ||೨||

ಕುವಲಯರೂಪನಾತನು ಶಿವ ಪ್ರೀತನು
ಭವಸಾಗತರವನು ದಾಂಟಿ
ತವ ಶಿಶುನಾಳಧೀಶನ ಸೇವಕನಿಗೆ ನೀ ||೩||


ಬರಹಕ್ಕಿಳಿಸದವರು: ಕಿಶೋರ‍್ ಚಂದ್ರ
ಪರಿಶೀಲನೆ : ಕಿಶೋರ‍್ ಚಂದ್ರ